ಬೆಂಗಳೂರು: ಮುಂಬೈ ಬಾಂಬ್ ಸ್ಪೋಟದ ರುವಾರಿ ಯಾಕೂಬ್ ಮೆಮನ್‍ಗೆ ವಿಧಿಸಿರುವ ಮರಣದಂಡನೆ ಶಿಕ್ಷೆ ರದ್ದುಪಡಿಸಿ ಅದನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಬೇಕು ಎಂದು ಮಿಷನ್ ಪಾಸಿಬಲ್ ಸಮಿತಿ ಮನವಿ ಮಾಡಿದೆ.
ಸಂಘದ ಮುಖ್ಯಸ್ಥ ಉಸ್ಮಾನ್ ಶರೀಫ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಾಕೂಬ್ ವಿರುದ್ಧ ಸೂಕ್ತ ಸಾಕ್ಷಿಯಾಧಾರಗಳು ಇಲ್ಲ. ಆದರೂ ಸುಪ್ರೀಂ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಆತನ ಅಣ್ಣನ ಮೇಲೆ ಆರೋಪವಿದ್ದು ಅದಕ್ಕಾಗಿ ತಮ್ಮನಿಗೆ ಶಿಕ್ಷೆ ನೀಡುವುದು ಸರಿಯಲ್ಲ ಎಂದರು.
ದೇಶದಲ್ಲಿ ನಡೆದಿರುವ ಸಾಕಷ್ಟು ಪ್ರಕರಣಗಳಲ್ಲಿ ನ್ಯಾಯಾಲಯ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿದೆ. ರಾಜೀವ್ ಗಾಂಧಿ ಹತ್ಯೆ ಮಾಡಿದ ಆರೋಪಿಗಳು, ವೀರಪ್ಪನ್ ಸಹಚರರಿಗೆ ವಿಧಿಸಿದ್ದ ಮರಣದಂಡನೆಯನ್ನು ಜೀವಾವಧಿಗೆ ಪರಿವರ್ತಿಸಲಾಗಿದೆ. ಹಾಗಾಗಿ ಈ ಪ್ರಕರಣದಲ್ಲೂ ಮೆಮನ್‍ಗೆ ಶಿಕ್ಷೆ ಬದಲಿಸಬೇಕು. ಮುಂಬೈ ಬಾಂಬ್ ಸ್ಪೋಟದಲ್ಲಿ ಮೆಮನ್ ಅಣ್ಣನ ಕೈವಾಡವಿರುವುದು ಸಾಬೀತಾಗಿದ್ದು ತಲೆಮರೆಸಿಕೊಂಡಿರುವ ಆತನನ್ನು ಬಂಧಿಸಬೇಕು ಎಂದು ಉಸ್ಮಾನ್ ಫರೀಫ್ ಆಗ್ರಹಿಸಿದರು. ಮೆಮನ್ ಈಗಾಗಲೇ 22 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದಾರೆ. ಹಾಗಾಗಿ ಶಿಕ್ಷೆ ಸಡಿಲಿಸಬೇಕು ಎಂದು ಮನವಿ ಮಾಡಿದರು. ಸಮಿತಿ ಮುಖಂಡರಾದ ನದೀಂ ಅಹ್ಮದ್, ಎಸ್.ಎಂ. ಇಕ್ಬಾಲ್, ಸೈಯದ್ ಶಫೀವುಲ್ಲಾ ಇತರರು ಇತರರು ಇದ್ದರು.