ಬೆಂಗಳೂರು: ನಗರದಲ್ಲಿ ಡೆಂಘೀ ಜ್ವರದ ಭಯ ಹೆಚ್ಚಿರುವುದರಿಂದ ಬಿಬಿಎಂಪಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಿದೆ.
ವಿಕ್ಟೋರಿಯಾ, ಬೌರಿಂಗ್, ಲೇಡಿ ಕರ್ಜನ್, ಕೆಸಿ ಜನರಲ್, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿರುವ ಪ್ರಮಾಣ ಅಧಿಕವಾಗುತ್ತಿದೆ. ಆದರೆ, ಹೆಚ್ಚಿನ ಪ್ರಕರಣಗಳಲ್ಲಿ ಡೆಂಘೀ ಜ್ವರ ಕಂಡುಬರುತ್ತಿಲ್ಲ. ಜ್ವರ ಬಂದಿದೆ ಎಂಬ ಭಾವನೆಯಿಂದಲೇ ಸಾಮಾನ್ಯ ಜ್ವರಕ್ಕೆ ಒಳಗಾದವರೂ ಆಸ್ಪತ್ರೆಗಳ ಮೆಟ್ಟಿಲು ಹತ್ತುತ್ತಿದ್ದಾರೆ.
ಕೆ.ಆರ್.ಪುರ, ಯಲಹಂಕ ಹಾಗೂ ಆನೇಕಲ್ ಸಾರ್ವಜನಿಕರ ಆಸ್ಪತ್ರೆಗಳಲ್ಲಿ ಜ್ವರದಿಂದ
ಬಳಲುತ್ತಿರುವ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದರೂ, ಡೆಂಘೀ ಜ್ವರ ಕಂಡುಬಂದಿಲ್ಲ. ಬಿಬಿಎಂಪಿ ಆಸ್ಪತ್ರೆಗಳಲ್ಲಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ದಾಖಲಾತಿ ಕಂಡುಬರುತ್ತಿದ್ದು, ಡೆಂಘೀ ಜ್ವರ ಕೆಲವೇ ಪ್ರಕರಣಗಳಲ್ಲಿ ಮಾತ್ರ ಕಂಡುಬರುತ್ತಿದೆ. ಜೊತೆಗೆ ತೀವ್ರ ಜ್ವರದಿಂದ ನರಳುವ ವೇಳೆ ವೈದ್ಯಕೀಯ ಪರೀಕ್ಷೆ ಸಾಧ್ಯವಾಗದಿರುವುದರಿಂದ ಡೆಂಘೀ ಜ್ವರದ ತಪಾಸಣೆ ಮಾಡುವುದೂ ಕಷ್ಟವಾಗುತ್ತಿದೆ.
ಗುರುವಾರದ ಆರೋಗ್ಯ ಇಲಾಖೆಯ ವರದಿ ಪ್ರಕಾರ, ನಗರದ ಸರ್ಕಾರಿ ಆಸ್ಪತ್ರೆಗಳಲ್ಲಿ 1,821 ಪ್ರಕರಣಗಳಲ್ಲಿ ಡೆಂಘೀ ಜ್ವರವಿರುವ ಅನುಮಾನ ಕಂಡುಬಂದಿದೆ. ಆದರೆ, ಜ್ವರ ಪತ್ತೆ ಖಚಿತವಾಗಿಲ್ಲ. ಇದರಲ್ಲಿ 322 ರೋಗಿಗಳ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಉಳಿದವರನ್ನು ಚಿಕಿತ್ಸೆ ಹಾಗೂ ತಪಾಸಣೆಗೆ ದಾಖಲಿಸಲಾಗಿದೆ. ಹಿಂದಿನ ಪ್ರಕರಣ ಸೇರಿದಂತೆ ಇದುವರೆಗೆ 162 ಮಂದಿಯಲ್ಲಿ ಡೆಂಘಿ ಇರುವುದು
ಖಚಿತವಾಗಿದೆ. ಇದುವರೆಗೆ ಡೆಂಘೀ ಜ್ವರದಿಂದ 6 ಮಂದಿ ಮೃತಪಟ್ಟಿದ್ದಾರೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಚಿಕೂನ್‍ಗುನ್ಯಾ ಭೀತಿ:
ಡೆಂಘೀ ಜ್ವರದ ಜೊತೆಗೆ ಚಿಕೂನ್‍ಗುನ್ಯಾ ಭೀತಿಯೂ ಆರಂಭವಾಗಿದೆ. ಇದುವರೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ 178 ಚಿಕೂನ್ ಗುನ್ಯಾ ರೋಗದಿಂದ ಬಳಸುತ್ತಿರುವುದು ಖಚಿತವಾಗಿದೆ. ಕೆಲವು ಸಂದರ್ಭಗಳಲ್ಲಿ ಚಿಕೂನ್ ಗುನ್ಯಾ ಹೊಂದಿರುವವರು ಡೆಂಘೀ ಇದೆ ಎಂಬ ಭಯದಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿದ್ದಾರೆ. ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ ಹಾಗೂ ಸೊಳ್ಳೆ ನಿಯಂತ್ರಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬಿಬಿಎಂಪಿಯಿಂದ ವಾರ್ಡ್ ಮಟ್ಟದಲ್ಲಿ ಸೊಳ್ಳೆ ನಾಶಕ ಸಿಂಪಡಿಸಲಾಗುತ್ತಿದೆ.
ಆರೋಗ್ಯ ಇಲಾಖೆಯಿಂದಲೂ ಜಾಗೃತಿ, ಮಾಹಿತಿ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ. ಆದರೆ ಸಕಾಲಕ್ಕೆ ಔಷಧ ದೊರೆಯದಿರುವುದು ಹಾಗೂ ಔಷಧ ಸಂಗ್ರಹಕ್ಕೆ ಕೊಠಡಿಗಳ ಕೊರತೆ ಉಂಟಾಗಿರುವುದರಿಂದ ಸಮಸ್ಯೆ ಉಲ್ಬಣಿಸುವ ಭೀತಿ ಹೆಚ್ಚಿದೆ. ರೋಗ ಭೀತಿಗೆ ಒಳಗಾದವರು ಸರ್ಕಾರಿಗಿಂತ ಹೆಚ್ಚಾಗಿ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದಾರೆ.