ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ದ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್ಐಆರ್‍ಗೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಡಿ-ನೋಟಿಫಿಕೇಷನ್ ಪ್ರಕರಣದಲ್ಲಿ ದಾಖಲಾಗಿರುವ ದೂರು ದುರುದ್ದೇಶದ್ದು, ಅದನ್ನು ರದ್ದುಪಡಿಸುವಂತೆ ಯಡಿಯೂರಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು. ಗುರುವಾರ ವಿಚಾರಣೆ ನಡೆಸಿದನ್ಯಾ. ಎ.ಎನ್. ವೇಣುಗೋಪಾಲ ಗೌಡ ಅವರಿದ್ದ ಏಕಸದಸ್ಯ ಪೀಠ, ಮಧ್ಯಂತರ ಆದೇಶ ಹೊರಡಿಸಲು ಈ ಪ್ರಕರಣ ತುರ್ತು ಅರ್ಜಿ ವ್ಯಾಪ್ತಿಗೆ ಬರುವುದಿಲ್ಲ. ಅಲ್ಲದೇ ನ್ಯಾಯಪೀಠವು ಇಂಥ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‍ನ ಆದೇಶ ಪಾಲಿಸಬೇಕಿದ್ದು, ಉಲ್ಲಂಘಿಸಿ ಆದೇಶಿಸಲು ಸಾಧ್ಯವಿಲ್ಲವೆಂದು ಅರ್ಜಿದಾರರ ಪರವಕೀಲರಿಗೆ ಬಿರುಸಿನ ಧಾಟಿಯಲ್ಲಿ ಉತ್ತರಿಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದ ಮಂಡಿಸಿ, ಲೋಕಾ ಯುಕ್ತ ಕಾಯ್ದೆ ಪ್ರಕಾರ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ ಮೇಲೆ ಅದರ
ವರದಿಯನ್ನು ಸಕ್ಷಮ ಪ್ರಾ„ಕಾರಕ್ಕೆ ನೀಡಬೇಕು. ಆದರೆ, ಲೋಕಾಯುಕ್ತ ಆ ನಿಯಮ ಪಾಲಿಸದೆ ಲೋಕಾಯುಕ್ತ ಪೊಲೀಸರಿಗೆ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಸೂಚಿಸಿದೆ.
ಅಲ್ಲದೇ ಈ ಪ್ರಕರಣದಲ್ಲಿ ದೂರುದಾರರ ಲೋಕಾಯುಕ್ತ ಪೊಲೀಸರಿಗೆ ನೇರವಾಗಿ ದೂರು ನೀಡಿಲ್ಲ. ಯಾವ ಅಧಿಕಾರ ವ್ಯಾಪ್ತಿ ಬಳಸಿ ಲೋಕಾಯುಕ್ತ ಎಸ್‍ಪಿ ಎಫ್ಐಆರ್ ದಾಖಲಿಸಿದ್ದಾರೆ? ಈ ರೀತಿ ಎಫ್ಐಆರ್ ದಾಖಲಿಸಿಕೊಳ್ಳಲು ಎಸ್‍ಪಿಗೆ ಇರುವ ಅಧಿಕಾರದ ವ್ಯಾಪ್ತಿಯೇನು? ಎಂದು ಪ್ರಶ್ನಿಸಿದರು. ಸದ್ಯ ದಾಖಲಾಗಿರುವ ಪ್ರಕರಣದಿಂದ ನಮ್ಮ ಕಕ್ಷಿದಾರರು ಸಾಕಷ್ಟು ತೊಂದರೆ ಅನುಭವಿ ಸುತ್ತಿದ್ದು, ಎಫ್ಐಆರ್ ಗೆ ತಡೆಯಾಜ್ಞೆ ನೀಡಬೇಕು ಎಂದು ಪೀಠಕ್ಕೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಸದ್ಯ ಲೋಕಾಯುಕ್ತ ಕಚೇರಿಯೇ ಇಲ್ಲವಾಗಿದೆ. ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಎದುರಿಸುತ್ತಿದ್ದು, ನಿಮಗೆ ಯಾರು ತೊಂದರೆ ನೀಡುತ್ತಾರೆ ಎಂದು ಹಾಸ್ಯ ಚಟಾಕಿ ಹಾರಿಸಿ ವಿಚಾರಣೆ ಆ.4ಕ್ಕೆ ಮುಂದೂಡಿದರು.
ಎಚ್‍ಡಿಕೆ ಅರ್ಜಿ ವಜಾ
ಅಕ್ರಮ ಡಿನೋಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿ ತಮ್ಮ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಪ್ರಕರಣ ರದ್ದುಪಡಿಸಬೇಕೆಂದು ಕೋರಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಹೈ ಕೋರ್ಟ್ ವಜಾ ಮಾಡಿದೆ. ಬೆಂಗಳೂರು ದಕ್ಷಿಣ ತಾಲೂಕಿನ ವಿವಿಧ ಸರ್ವೆ ನಂಬರ್ ಗಳಲ್ಲಿ ಒಟ್ಟು 2 ಎಕರೆ 24 ಗುಂಟೆ ಜಮೀನನ್ನು ಅಕ್ರಮ ಡಿನೋಟಿಫೈ ಮಾಡಲಾಗಿದೆ ಎಂದು ಆರೋಪಿಸಿ ಚಾಮರಾಜನಗರ ತಾಲೂಕಿನ ಸಂತೇಮಾರನಹಳ್ಳಿ ಎಂ.ಎಸ್.ಮಹದೇವ ಸ್ವಾಮಿ ದೂರು ಸಲ್ಲಿಸಿದ್ದರು.
ದೂರು ರದ್ದತಿಗೆ ಕೋರಿ ಎಚ್ ಡಿಕೆ ಹೈ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಚ್.ಬಿಳ್ಳಪ್ಪ ಅವರಿದ್ದ ಏಕಸದಸ್ಯ ಪೀಠ, ಕುಮಾರಸ್ವಾಮಿ ಸಿಎಂ ಹುದ್ದೆಯಿಂದ ಕೆಳಗಿಳಿಯುವ 3ದಿನ ಮೊದಲು ಈ ಡಿನೋಟಿಫಿಕೇಷನ್ ಗೆ ಮುಂದಾಗಿದ್ದಾರೆ ಹಾಗೂ ಇದು ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿಲ್ಲ ಎಂದು ಆದೇಶದಲ್ಲಿ ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಪ್ರಕರಣದ ವಿವರ
ಬಿ.ಎಸ್ ಯಡಿಯೂರಪ್ಪ ಅವರು ಸಿಎಂ ಆಗಿದ್ದ ವೇಳೆ ಅಕ್ರಮವಾಗಿ ಡಿ-ನೋಟಿಫಿಕೇಷನ್ ಮಾಡಿದ್ದಾರೆಂದು ಸಾಮಾಜಿಕ ಕಾರ್ಯಕರ್ತ ಜಯಕುಮರ್ ಹಿರೇಮಠ್ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರು. ಸರ್ವೆ ಸಂ.251ರ ಹಲಗೆವಡೇರಹಳ್ಳಿ, ಸರ್ವೆ ಸಂಖ್ಯೆ 5/1 ಮತ್ತು 6/3 ರ ಬಿಳೇಕಹಳ್ಳಿ ಮತ್ತು ಸರ್ವೆ ಸಂಖ್ಯೆ 117ರ ಜೆ.ಬಿ.ಕಾವಲ್ ನಲ್ಲಿ ಅಕ್ರಮವಾಗಿ ಡಿ-ನೋಟಿಫಿಕೇಷನ್ ಮಾಡಿದ್ದು, ಇದು ಸಿಎಜಿ ವರದಿಯಲ್ಲಿ ಉಲ್ಲೇಖವಾಗಿದೆ ಎಂದು ದೂರು ದಾಖಲಿಸಿದ್ದರು. ಇದರ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಬಿಎಸ್ ವೈ ಹೈ ಕೋರ್ಟ್ ಮೆಟ್ಟಿಲೇರಿದ್ದಾರೆ.