ಬೆಂಗಳೂರು: ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಮುಂದುವರಿದಿದ್ದು, ಶುಕ್ರವಾರವೂ ಆರು ರೈತರು ಸಾವಿಗೆ ಶರಣಾಗಿದ್ದಾರೆ.
ಮಧುಗಿರಿ ತಾಲೂಕಿನ ಕಂಸಾನ ಹಳ್ಳಿಯ ರೈತ ಎಲ್.ಟಿ ರಾಜು (42), ಮೂರು ವರ್ಷಗಳಲ್ಲಿ ನಾಲ್ಕು ಕೊಳವೆಬಾವಿ ಕೊರೆಸಿದ್ದರು. ಮೂರು ಕೊಳವೆಬಾವಿಗಳು ವಿಫಲವಾಗಿದ್ದವು.ಜತೆಗೆ ಸಾಲವಿತ್ತು.
ಸಿಂಧನೂರು ತಾಲೂಕಿನ ಗೋನವಾರದ ಮಾಬುಸಾಬ್(35) 15 ಎಕರೆ ಹೊಲದಲ್ಲಿ ಹತ್ತಿ ಬಿತ್ತನೆ ಮಾಡಿದ್ದರು.ಮಳೆ ಬಾರದ ಹಿನ್ನೆಲೆಯಲ್ಲಿ ಬೀಜ ಮೊಳಕೆಯೊಡೆಯದೆ ಬೆಳೆ ನಾಶವಾಗಿದೆ. ಸಹಕಾರಿ ಸಂಘಗಳಲ್ಲಿ, ಪರಿಚಯಸ್ಥರ ಬಳಿ ಮಾಬುಸಾಬ್ ಸಾಲ ಮಾಡಿ ಕೊಂಡಿದ್ದರು. ಸೋಮವಾರಪೇಟೆ ತಾಲೂಕು ಶಾಂತಳ್ಳಿ ಗ್ರಾಮದ ಸುರೇಶ್ (44) ಸಹಕಾರ ಸಂಘ ಸೇರಿದಂತೆ ಕಾರ್ಪೊರೇಷನ್ ಹಾಗೂ ಪಿಎಲ್‍ಡಿ ಬ್ಯಾಂಕಿನಲ್ಲಿ 1.50 ಲಕ್ಷದಷ್ಟು ಸಾಲ ಪಡೆದಿದ್ದರು. ಪರಿಚಯಸ್ಥರಿಂದಲೂ ಸಾಲ ತೆಗೆದುಕೊಂಡಿದ್ದರು. ಅಲ್ಲದೆ, ಅತಿ ಮಳೆಯಿಂದಾಗಿ ಕಾಫಿ ಬೆಳೆಯೂ ಕೊಳೆತಿತ್ತು.
ಯಲಬುರ್ಗಾ ತಾಲೂಕಿನ ಚಿಕ್ಕಬನ್ನಿ ಗೋಳ ತಾಂಡಾದ ರೈತ ಶಿವಪ್ಪ ಆನಂದಪ್ಪ ಪೂಜಾರಿ(39) 2 ಜಮೀನು ಹೊಂದಿದ್ದು, ಗಜೇಂದ್ರಗಡ ಎಸ್‍ಬಿಐ ಶಾಖೆಯಲ್ಲಿ 2 ಲಕ್ಷ ಮತ್ತು ಲೇವಾದೇವಿಗಾರರ ಬಳಿ ಸಾಲ ಮಾಡಿದ್ದರು.ಸಕಾಲಕ್ಕೆ ಮಳೆ ಇಲ್ಲದೆ ಬೆಳೆಯೂ ಹಾಳಾಗಿತ್ತು. ಕಲಘಟಗಿ ತಾಲೂಕಿನ ಜಿನ್ನೂರ ಗ್ರಾಮದ ರೈತ ಉಳವನಗೌಡ ವೀರನಗೌಡ ಪಾಟೀಲ(35) ಸಹಕಾರಿ ಸೇವಾ ಕೃಷಿ ಅಭಿವೃದ್ಧಿ ಬ್ಯಾಂಕ್‍ಗಳಲ್ಲಿ ಒಟ್ಟು 1.50 ಲಕ್ಷ ರೂಪಾಯಿ ಸಾಲ ಮಾಡಿದ್ದರು.ಬಳ್ಳಾರಿ ತಾಲೂಕಿನ ಕಪ್ಪಗಲ್‍ನ ದಾದಾವಲಿ(35) ಒಂದೂವರೆ ಎಕರೆಯಲ್ಲಿ ಬೆಳೆದಿದ್ದ ಬೆಳೆ ಹಾನಿಗೀಡಾಗಿತ್ತು. ಬ್ಯಾಂಕ್ ಮತ್ತು ಪರಿಚಯಸ್ಥರಿಂದ 2.80ಲಕ್ಷ ಸಾಲ ಮಾಡಿದ್ದರು.
ಆತ್ಮಹತ್ಯೆ ತಡೆಗೆ ಕೆಪಿಸಿಸಿಯಿಂದ 4 ತಂಡ
ರೈತರ ಆತ್ಮಹತ್ಯೆ ತಡೆಗಟ್ಟಲು ಹಾಗೂ ಪಕ್ಷದ ವತಿಯಿಂದ ಸೂಕ್ತ ಪರಿಹಾರ ಧನ ನೀಡಲು ಕೆಪಿಸಿಸಿ ವತಿಯಿಂದ ನಾಲ್ಕು ಪ್ರತ್ಯೇಕ ತಂಡಗಳನ್ನು ರಚಿಸಲು ನಿರ್ಧರಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರೈತರ ಆತ್ಮಹತ್ಯೆ ಮತ್ತು ಬಿಬಿಎಂಪಿ ಚುನಾವಣೆ ಸಿದ್ಧತೆ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ.
ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಸಾವಿನ ಬಗ್ಗೆ ಸಭೆಯಲ್ಲಿ ಸಂತಾಪ ವ್ಯಕ್ತಪಡಿಸಲಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬರಗಾಲ ಪರಿಸ್ಥಿತಿ ಇದೆ.ನಾಲ್ಕು ಕಂದಾಯ ಗ್ರಾಮಗಳಿಗೆ ಕೆಪಿಸಿಸಿ ವತಿಯಿಂದ ನಾಲ್ಕು ತಂಡಗಳನ್ನು ರಚನೆ ಮಾಡಿ, ಸ್ಥಳೀಯ ಮುಖಂಡರು ಮತ್ತು ಶಾಸಕರು ಜತೆಗೂಡಿ ಬರಗಾಲಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಸಮಗ್ರ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲು ನಿರ್ಧರಿಸಲಾಗಿದೆ.
ರೈತ ಸಂಘದಿಂದ ಜಾಗೃತಿ ಅಭಿಯಾನ
ರೈತರು ಆತ್ಮಹತ್ಯೆಗೆ ಶರಣಾಗದಂತೆ ಜಾಗೃತಿ ಮೂಡಿಸಲು ಆ.6ರಿಂದ ಮಂಡ್ಯದ ಶಿವಪುರದಿಂದ ಅಭಿಯಾನ ಆರಂಭಿಸಲಾಗುವುದು ಎಂದು ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ತುಮಕೂರು, ಬೆಳಗಾವಿ, ಮೈಸೂರು, ಬೆಂಗಳೂರು ಹಾಗೂ ಬೀದರ್ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಅಭಿಯಾನ ನಡೆಯಲಿದ್ದು, ಜಾಥಾ ಮೂಲಕ ಜಿಲ್ಲೆಗಳ ಗ್ರಾಮಗಳಿಗೆ ಭೇಟಿ ನೀಡಲಾಗುವುದು ಎಂದರು.