ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

`ಭಾಸ್ಕರ'ನಲ್ಲ ರಾಹು, ಭೂತ, ಊರಿಂದಾಚೆ ಹಾಕಿ!

'ಮಾರಿ', `ನೀಚ',`ಭಾಸ್ಕರನಲ್ಲ ರಾಹು', ಊರಿಂದಾಚೆಗೆ ಹಾಕಲು ಏನೆಲ್ಲಾ ಬಲಿಕೊಡಬೇಕೋ... ಇದೆಲ್ಲಾ ಲೋಕಾಯುಕ್ತ ಸ್ಥಾನಕ್ಕೆ ರಾಜಿನಾಮೆ ನೀಡದ...

ಎಸ್‍ಐಟಿ ಪೊಲೀಸರ ವಶದಲ್ಲಿರುವ ಆರೋಪಿಗಳಾದ ಶಂಕರೇಗೌಡ, ಶ್ರೀನಿವಾಸ ಗೌಡ ಮತ್ತು ಅಶೋಕ್ ಕುಮಾರ್
Sumana Upadhyaya
Updated On : 1 Aug 2015, 10:33 am

ವಿಧಾನಪರಿಷತ್ತು: 'ಮಾರಿ', `ನೀಚ',`ಭಾಸ್ಕರನಲ್ಲ ರಾಹು', ಊರಿಂದಾಚೆಗೆ ಹಾಕಲು ಏನೆಲ್ಲಾ ಬಲಿಕೊಡಬೇಕೋ... ಇದೆಲ್ಲಾ ಲೋಕಾಯುಕ್ತ ಸ್ಥಾನಕ್ಕೆ ರಾಜಿನಾಮೆ ನೀಡದ ಲೋಕಾಯುಕ್ತ ನ್ಯಾ.ಭಾಸ್ಕರ್ ರಾವ್ ವಿರುದ್ಧ ಜನಪ್ರತಿನಿಧಿಗಳ ಮಾತಿನ ಚಾಟಿ ಏಟುಗಳು.

ಲೋಕಾಯುಕ್ತ (ತಿದ್ದುಪಡಿ) ವಿಧೇಯಕ ಅಂಗೀಕಾರಕ್ಕೆ ಮುನ್ನ ನಡೆದ ಚರ್ಚೆಯಲ್ಲಿ ಪಾಲ್ಗೊಂಡ ಸದಸ್ಯರು, ಲೋಕಾಯುಕ್ತರ ವಿರುದ್ಧ ಹರಿತ ಶಬ್ದಗಳಲ್ಲಿ ಹರಿಹಾಯ್ದರು. ಓಡಿಸದ ಹೊರತು ಆ `ಭೂತ' ಹೋಗಲ್ಲ. ಅದನ್ನು ಶನಿ, ಭೂತ ಅಂತಲಾದ್ರೂ ಕರೆಯಬಹುದು ಎಂದು ಮೊದಲು ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಟೀಕಾಪ್ರಹಾರ ಪ್ರಯೋಗಿಸಿದರು. ಅಷ್ಟೇ ಅಲ್ಲದೇ ಮಾರಿಯನ್ನು ಊರಿನಿಂದಾಚೆ ಹಾಕುವ ರೀತಿ ಹೊರಗೆ ಕಳಿಸಬೇಕಾಗಿದೆ. ಅವರ ಮೇಲೆ ಕಳಂಕ ಬಂದಿರುವಾಗ ರಾಜಿನಾಮೆ ಕೊಡಬೇಕೆಂಬುದು ಎಲ್ಲರ ಆಗ್ರಹ. ಈ ವಿಚಾರದಲ್ಲಿ ಆರೂವರೆ ಕೋಟಿ ಜನ ಒಂದು ಕಡೆ, ಒಬ್ಬ ವ್ಯಕ್ತಿ ಇನ್ನೊಂದು ಕಡೆ. ನಾವು ಕೂಡ ಅಸಹಾಯಕರಾಗಿದ್ದೇವೆ ಎಂದರು.

ಮಾರಿ ಒಳಗೆ ಬಂದಿದೆ. ಹೊರಗೆ ಕಳಿಸಲು ಏನೆಲ್ಲಾ ಬಲಿ ಕೊಡಬೇಕೋ ಎಂದು ಮಾರ್ಮಿಕವಾಗಿ ಹೇಳಿದರಲ್ಲದೇ, ಪ್ರತಿ ದಿನ ದೇವರನ್ನು ನೆನಪು  ಮಾಡಿಕೊಳ್ಳುವುದಕ್ಕಿಂತ ಹೆಚ್ಚು ಲೋಕಾಯುಕ್ತರನ್ನು ನೆನಪು ಮಾಡಿಕೊಳ್ಳುವಂತಾಗಿದೆ ಎಂದು ಹೇಳಿದರು.

ಈಶ್ವರಪ್ಪನವರ ಮಾತಿಗೆ ದನಿಗೂಡಿಸಿದ ಜೆಡಿಎಸ್‍ನ ಬಸವರಾಜ ಹೊರಟ್ಟಿ, ವಯಸ್ಸಿನ ಕಾರಣದಿಂದ `ಅರಳು ಮರಳಾಗಿದೆ' ಎಂದು ದನಿಗೂಡಿಸಿದರು. ಇಷ್ಟೆಲ್ಲಾ ಬೆಳವಣಿಗೆ ನಡೆದು ಮಾತನಾಡಿದರೂ ರಾಜಿನಾಮೆ ಕೊಡದೇ ಇರುವುದಕ್ಕೆ ಏನೆನ್ನಬೇಕೋ ಎಂದು ಪ್ರಶ್ನೆ ಹಾಕಿದರು.

ಕಾಂಗ್ರೆಸ್‍ನ ಹಿರಿಯ ಸದಸ್ಯ ವೀರಣ್ಣ ಮತ್ತಿಕಟ್ಟಿ ಮಾತನಾಡಿ, ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ರಾಜಿನಾಮೆ ಕೊಡಬೇಕಾಗಿತ್ತು. ದುರ್ದೈವ ಎಂದರು.ಚರ್ಚೆಯಲ್ಲಿ ಪಾಲ್ಗೊಂಡ ಹಿರಿಯ ಸದಸ್ಯ ಕೆ.ಬಿ.ಶಾಣಪ್ಪ, ಅವರನ್ನು ಶನಿ ಎಂದು ಬಯ್ದರೆ ಸಾಲದು, ತಕ್ಷಣವೇ ಹೊರಗೆ ಕಳುಹಿಸುವ ದಿಟ್ಟ ಕ್ರಮವಾಗಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜೆಡಿಎಸ್ ಸದಸ್ಯ ಇ.ಕೃಷ್ಣಪ್ಪ ಅವರು ಮಾತನಾಡುವಾಗ `ನೀಚ' ಎಂಬ ಪದ ಪ್ರಯೋಗವನ್ನೂ ಮಾಡಿದರು. ಅಂಥವರು ಲೋಕಾಯುಕ್ತ ಸ್ಥಾನಕ್ಕೆ ಬಂದು ಇಡೀ ಸಂಸ್ಥೆಗೆ ಕಳಂಕ ತಂದರು ಎಂದು ಕಟಕಿದರು. ಕೊನೆಯಲ್ಲಿ ಮಾತನಾಡಿದ ಬಿಜೆಪಿ ಸದಸ್ಯ ಗೋ.ಮಧುಸೂಧನ್, ಅವರು ಭಾಸ್ಕರನಲ್ಲ `ರಾಹು' ಎಂದು ಗಂಭೀರವಾಗಿ ಟೀಕಿಸಿದರಲ್ಲದೇ, ಲೋಕಾಯುಕ್ತದಲ್ಲಿ ಭಾಸ್ಕರನ ಉದಯವಾಗಲಿಲ್ಲ, ರಾಹು ದರ್ಶನವಾಗುತ್ತಿದೆ ಎಂದು ಟೀಕಿಸಿದರು.

ಇಬ್ಬರಿಗೆ 14ರವರೆಗೆ ನ್ಯಾಯಾಂಗ ಬಂಧನ, ಮತ್ತೊಬ್ಬ ಎಸ್‍ಐಟಿ ವಶಕ್ಕೆ ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾಗಿದ್ದ ಪತ್ರಕರ್ತ ಶ್ರೀನಿವಾಸ ಗೌಡ ಹಾಗೂ ಶಂಕರೇಗೌಡರನ್ನು ನ್ಯಾಯಾಂಗ ಬಂಧನ ಹಾಗೂ ಮತ್ತೊಬ್ಬ ಆರೋಪಿ ಅಶೋಕ್ ಕುಮಾರ್‍ನನ್ನು ಎಸ್‍ಐಟಿ ಪೊಲೀಸರ ವಶಕ್ಕೆ ಒಪ್ಪಿಸಿ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಜುಲೈ 31ರವರೆಗೆ ಈ ಮೂವರು ಆರೋಪಿಗಳನ್ನು ಪೊಲೀಸ್ ವಶಕ್ಕೆ ಒಪ್ಪಿಸಿ ನ್ಯಾಯಾಲಯ ಸೂಚಿಸಿತ್ತು. ಬಂಧನದ ಅವಧಿ ಮುಗಿದ ಹಿನ್ನೆಲೆಯಲ್ಲಿ ಎಸ್‍ಐಟಿ ಪೊಲೀಸರು ಶುಕ್ರವಾರ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.ಈ ವೇಳೆ 3ನೇ ಆರೋಪಿ ಶ್ರೀನಿವಾಸಗೌಡ ಹಾಗೂ 4ನೇ ಆರೋಪಿ ಶಂಕರೇಗೌಡನಿಗೆ ಆಗಸ್ಟ್ 14ರವರೆಗೆ ನ್ಯಾಯಾಂಗ ಬಂಧನ ಹಾಗೂ 2ನೇ ಆರೋಪಿ ಅಶೋಕ್‍ಕುಮಾರ್‍ಗೆ ನಾಲ್ಕು ದಿನ ಪೊಲೀಸ್ ವಶಕ್ಕೆ ಒಪ್ಪಿಸಿ ನ್ಯಾಯಾಧೀಶ ವಿ.ಜಿ.ಬೋಪಯ್ಯ ಆದೇಶ ನೀಡಿದರು.

ಲಂಚ ಪ್ರಕರಣದ ಪ್ರಮುಖ ರುವಾರಿ ಅಶೋಕ್ ಕುಮಾರ್‍ನ ವಿಚಾರಣೆ ಇನ್ನು ಮುಗಿದಿಲ್ಲ. ಆತನಿಂದ ಇನ್ನೂ ಹೆಚ್ಚಿನ ಮಾಹಿತಿ ಸಂಗ್ರಹಿಸಬೇಕಿದೆ. ಹಾಗಾಗಿ ಆತನನ್ನು ಪೆÇಲೀಸ್ ವಶಕ್ಕೆ ನೀಡಬೇಕು ಎಂದು ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಪೊಲೀಸರ ಅರ್ಜಿ ಪರಿಶೀಲಿಸಿ, ಪುರಸ್ಕರಿಸಿದ ನ್ಯಾಯಾಧೀಶರು ಅಶೋಕ್ ಕುಮಾರ್‍ನ್ನು ಪೊಲೀಸ್ ವಶಕ್ಕೆ ಒಪ್ಪಿಸಿದರು.

ಈ ನಡುವೆ ಮೂವರು ಆರೋಪಿಗಳು ಸಹ ತಮಗೆ ಜಾಮೀನು ನೀಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಧೀಶರು ಅದಕ್ಕೆ ತಕರಾರು ಸಲ್ಲಿಸಲು ಸರ್ಕಾರಿ ಅಭಿಯೋಜಕರಿಗೆ ಎರಡು ದಿನ ಕಾಲಾವಕಾಶ ನೀಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ನೀಡಿದ ಬಳಿಕ  ಶ್ರೀನಿವಾಸಗೌಡ ಮತ್ತು ಶಂಕರಗೌಡರನ್ನು ಪೊಲೀಸರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದರು. ಮತ್ತೊಬ್ಬ ಆರೋಪಿ ಅಶೋಕ್‍ಕುಮಾರನನ್ನು ವಶಕ್ಕೆ ಪಡೆದು ರಹಸ್ಯ ಸ್ಥಳಕ್ಕೆ ಕರೆದೊಯ್ದ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ಆಂಧ್ರಪ್ರದೇಶ ವಾರಂಗಲ್ ಮೂಲದ ಅಶೋಕ್‍ಕುಮಾರ್ ಬೆಂಗಳೂರಿನ ರಾಜಾಜಿನಗರದಲ್ಲಿ ವಾಸಿಸುತ್ತಿದ್ದು, ಸೆಕ್ಯೂರಿಟಿ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement