ವಿಧಾನಸಭೆ: ಬಿಬಿಎಂಪಿಯಲ್ಲಿ 95 ವಾರ್ಡ್ ಗಳಿಗೆ ಘನತ್ಯಾಜ್ಯ ಸಂಗ್ರಹಣೆ ಹಾಗೂ ಸಾಗಣೆಗೆ ರು.276.72 ಕೋಟಿ ವೆಚ್ಚದ ಅಂದಾಜು ತಯಾರಿಸಲಾಗಿದ್ದು, ಇದು ಹೊಸ ಮಾನದಂಡಗಳನ್ನು ಒಳಗೊಂಡಿದೆ. ಒಟ್ಟಾರೆ ಬಿಬಿಎಂಪಿ ವ್ಯಾಪ್ತಿಗೆ ರು.700 ಕೋಟಿ ವೆಚ್ಚ ಮಾಡಲಾಗುತ್ತದೆ.
ಇದು ಮುಂಬಯಿ, ಹೈದರಾಬಾದ್, ಕೋಲ್ಕತಾಗಿಂತ ಕಡಿಮೆ. ಹೀಗಾಗಿ ಬಿಜೆಪಿ ಸದಸ್ಯರು ಮಾಡಿರುವ ಆರೋಪದಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ
ಸ್ಪಷ್ಟಪಡಿಸಿದ್ದಾರೆ. ಘನತ್ಯಾಜ್ಯ ನಿರ್ವಹಣೆಗೆ ವರ್ಷಕ್ಕೆ ರು.1,800 ಕೋಟಿ ವೆಚ್ಚ ಮಾಡಲು ಸರ್ಕಾರ ಮುಂದಾಗಿದ್ದು ಇದು ಆರ್ಥಿಕ ಹೊರೆಗೆ ಕಾರಣವಾಗಿದೆ ಎಂದು ಬಿಜೆಪಿಯ ಸಿ.ಟಿ.
ರವಿ, ಡಾ. ಅಶ್ವತ್ಥನಾರಾಯಣ ಅವರು ನಿಯಮ 69ರಲ್ಲಿ ಮಾತನಾಡಿ, ಆರೋಪ ಮಾಡಿದರು. ಇದಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿಯವರು, ಅವರು ಹೇಳಿದಂತೆ ಸರ್ಕಾರ ಹೆಚ್ಚಿನ ಹಣ ಭರಿಸುತ್ತಿಲ್ಲ. ಇದೀಗ ಒಟ್ಟಾರೆ ರು.500 ಕೋಟಿ ವೆಚ್ಚವಾಗುತ್ತಿದೆ. ಹೊಸ ಮಾನದಂಡಗಳನ್ನು ಅಳವಡಿಸಿ ವ್ಯವಸ್ಥೆ ಸರಿಪಡಿಸಲು ಇನ್ನೂ ರು.200 ಕೋಟಿ ಹೆಚ್ಚಾಗುತ್ತದೆ ಅಷ್ಟೇ ಎಂದರು.
ಮುಂಬಯಿಯಲ್ಲಿ 125 ಲಕ್ಷ ಜನಸಂಖ್ಯೆಗೆ ವಾರ್ಷಿಕ ರು.1,855 ಕೋಟಿ ವೆಚ್ಚ ಮಾಡುತ್ತಿದ್ದಾರೆ. ಹೈದರಾಬಾದ್‍ನಲ್ಲಿ 67 ಲಕ್ಷ ಜನಸಂಖ್ಯೆಗೆ ರು.495 ಕೋಟಿ, ಕೋಲ್ಕತಾದಲ್ಲಿ 45 ಲಕ್ಷ ಜನರಿಗೆ ರು.450 ಕೋಟಿ ವೆಚ್ಚವಾಗುತ್ತಿದೆ. ಇತರೆ ನಗರಕ್ಕಿಂತ ಇಲ್ಲಿ ಹೆಚ್ಚು ಹಣ ವೆಚ್ಚ ಎಂಬ ಮಾಹಿತಿ ಸುಳ್ಳು. ನಾವು ಹೊಸ ಮಾನದಂಡಗಳನ್ನು ರೂಪಿಸಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಟೆಂಡರ್ ಕರೆದಿದ್ದೇವೆ. ಈ ಟೆಂಡರ್‍ಗೂ ಈಗ ಕೋರ್ಟ್ ತಡೆಯಾಜ್ಞೆ ನೀಡಿದೆ. ಅದೆಲ್ಲ ಪ್ರಕ್ರಿಯೆ ಮುಗಿದ ನಂತರ ಉಳಿದ ವಿಷಯಗಳ ಬಗ್ಗೆ ಚರ್ಚಿಸೋಣ ಎಂದು ಸಿದ್ದರಾಮಯ್ಯ ಹೇಳಿದರು.