ಬೆಂಗಳೂರು: ಬೆಸ್ಕಾಂನ ನಕಲಿ ರಸೀದಿ ತಯಾರಿಸಿ ಸಲಾರ್‍ಪುರಿಯಾ ಕಂಪನಿ ಒಳಗೊಂಡಂತೆ ಮೂರು ಕಂಪನಿಗಳಿಗೆ ರು.30 ಲಕ್ಷ ವಂಚಿಸಿದ ಆರೋಪಿಗಳನ್ನು ಬೆಸ್ಕಾಂ ಜಾಗೃತ ದಳ ಬಂಧಿಸಿದೆ.
ಸಲಾರ್ ಪುರಿಯಾ ಕಂಪನಿ ಹೊಸೂರು ರಸ್ತೆಯಲ್ಲಿ ಗೀನೇಜ್ ಎಂಬ ಕಟ್ಟಡ ನಿರ್ಮಿಸುತ್ತಿದೆ. ಕಟ್ಟಡಕ್ಕಾಗಿ ಬೆಸ್ಕಾಂ ಉಪವಿಭಾಗ ಕೂಡ್ಲುಗೇಟ್ ನಿಂದ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯಲಾಗಿತ್ತು. ಸುರೇಶ್ ಕುಮಾರ್ ಎಂಬುವರು ಈ ಸಂಪರ್ಕದ ಬಿಲ್ ಪಾವತಿಗೆ ಸಂಬಂಧಿಸಿದಂತೆ ಬೆಸ್ಕಾಂನ ವಾಸ್ತವ ಬಿಲ್ ಮೊತ್ತಕ್ಕಿಂತ ಹೆಚ್ಚು ಮೊತ್ತಕ್ಕೆ ಬೆಸ್ಕಾಂನ ನಕಲಿ ಬಿಲ್ ತಯಾರಿಸಿ ಸಲಾರ್ ಪುರಿಯಾ ಕಂಪನಿಗೆ ನೀಡಿ ಹೆಚ್ಚು ಮೊತ್ತದ ಡಿಡಿ ಪಡೆದು ಆ್ಯಕ್ಸಿಸ್ ಬ್ಯಾಂಕ್ ನಲ್ಲಿ ಎಇಇ ಎಸ್8 ಸಬ್ ಡಿವಿಶನ್ ಲಾಜಿಕ್ ಟೆಕ್ ಡೆವಲಪ್ ಮೆಂಟ್ ತಾನೇ ತೆರೆದಿರುವ ಖಾತೆಗೆ ಹಣ ಜಮಾ ಮಾಡಿದ್ದಾರೆ. ನಂತರ, ಬೆಸ್ಕಾಂನ ಅಸಲಿ ಬಿಲ್ ಮೊತ್ತಕ್ಕೆ ಡಿಡಿ ಪಡೆದು ಬೆಸ್ಕಾಂಗೆ ನೀಡಿ ರಸೀದಿ ಪಡೆದು ಸಲಾರ್ ಪುರಿಯಾ ಕಂಪನಿ ನೀಡಿರುವ ಮೊತ್ತಕ್ಕೆ ನಕಲಿ ರಸೀದಿ ತಯಾರಿಸಿ ನೀಡಿದ್ದಾನೆ ಎಂದು ಬೆಸ್ಕಾಂ ಜಾಗೃತದಳದ ಪೊಲೀಸ್ ಅಧೀಕ್ಷಕ ಎ.ಎನ್.ಪ್ರಕಾಶ್ ಗೌಡ ನಗರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪ್ರಕರಣ ಕುರಿತು ಬೆಸ್ಕಾಂ ಜಾಗೃತದಳದ ಪೊಲೀಸರು ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಆರೋಪಿಗಳು 2013-15
ರವರೆಗೆ ಸಲಾರ್‍ಪುರಿಯಾ, ಬಿಲಿಮೊರಿಯಾ ಹಾಗೂ ನೀಲಾಂಚಲ್ ಕಂಪಿನಗಳಿಗೆ ರು.30 ಲಕ್ಷ ವಂಚಿಸಿದ್ದಾರೆ. ಆದರೆ, ಅವರು ಬೆಸ್ಕಾಂ ಪಾವತಿಸಬೇಕಿದ್ದ ಮೊದ್ದ ಪಾವತಿಸಿರುವುದರಿಂದ ಬೆಸ್ಕಾಂಗೆ ಯಾವುದೇ ನಷ್ಟ ಉಂಟಾಗಿಲ್ಲ. ಆರೋಪಿ ಸುರೇಶ್ ಕುಮಾರ್ ಮನೆಯಲ್ಲಿ ಕೃತ್ಯಕ್ಕೆ ಬಳಸಿದ್ದ ಕಂಪ್ಯೂಟರ್, ಸಿಪಿಯು, ಪ್ರಿಂಟರ್, ಸೀಲ್ ಹಾಗೂ ಬೆಸ್ಕಾಂ ರಸೀದಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಮತ್ತೊಬ್ಬ ಆರೋಪಿ ಜಗದೀಶ್ ಸೊರಟೂರು ಸಲಾರ್ ಪುರಿಯಾ ಕಂಪನಿಯ ಎಲೆಕ್ಟ್ರಿಕ್ ವಿಭಾಗದಲ್ಲಿ ಅಸಿಸ್ಟೆ ಪ್ರಾಜೆಕ್ಟ್ ಮ್ಯಾನೇಜನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಸುರೇಶ್ ಕುಮಾರ್ ಜತೆ ಸೇರಿ ನಕಲಿ ಬಿಲ್ ತಯಾರಿಕೆಗೆ ನೆರವಾಗಿದ್ದಾನೆ. ನಕಲಿ ಅಕೌಂಟ್ ತೆರೆದು ಆರೋಪಿಗಳಿಗೆ ಸಹಕರಿಸಿದ ಆರೋಪದ ಮೇಲೆ ಆ್ಯಕ್ಸಿಸ್ ಬ್ಯಾಂಕ್ ನ ಹಿಂದಿನ ಮ್ಯಾನೇಜರ್ ಗೆ ನೋಟಿಸ್ ನೀಡಲಾಗಿದೆ ಎಂದರು.