ಬೆಂಗಳೂರು: ಸಾಲ ವಾಪಸ್ ಮಾಡದ ಸ್ನೇಹಿತನಿಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿರುವ ಘಟನೆ ಅವಲಹಳ್ಳಿ ಗಣಪತಿ ನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಗಾರೆ ಕೆಲಸ ಮಾಡುವ ರಘು ಎಂಬಾತನೇ ಸ್ನೇಹಿತ ರಾಜು ಎಂಬಾತನಿಂದ ಹಲ್ಲೆಗೊಳಗಾದವ. ಚಾಕು ಇರಿತದಿಂದ ಗಾಯಗೊಂಡಿರುವ ರಘುನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರಘು ಹಾಗೂ ಬಟ್ಟೆ ಇಸ್ತ್ರಿ ಮಾಡುವ ರಾಜು ಕಳೆದ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು. ಕೆಲ ದಿನಗಳ ಹಿಂದೆ ರಘುಗೆ ರಾಜು ರು.15 ಸಾವಿರ ಹಣ ನೀಡಿದ್ದ ಎನ್ನಲಾಗಿದೆ. ಆದರೆ, ಇದನ್ನು ಸೂಕ್ತ ಸಮಯಕ್ಕೆ ರಘು ವಾಪಸ್ ಮಾಡಿರಲಿಲ್ಲ. ಈ ವಿಚಾರವಾಗಿ ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು.
ಸೋಮವಾರ ರಾತ್ರಿ 9.30ರ ಸುಮಾರಿಗೆ ಹಣದ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ರಾಜು, ತನ್ನ ಬಳಿಯಿದ್ದ ಚಾಕು ತೆಗೆದು ರಘು ಹೊಟ್ಟೆಗೆ ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ. ಈ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ರಘು ಚಿಕ್ಕಪ್ಪ ಎಂಬುವರು ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ರಘುನನ್ನು ಪೊಲೀಸರ ನೆರವಿನೊಂದಿಗೆ ಆಸ್ಪತ್ರೆಗೆ ಸಾಗಿಸಿದ್ದಾರೆ. ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.