ಬೆಂಗಳೂರು: ಸರಗಳ್ಳತನ ನಿಯಂತ್ರಣಕ್ಕೆ ಪೊಲೀಸರು ಶತಾಯಗತಾಯ ಪ್ರಯತ್ನ ನಡೆಸುತ್ತಿರುವ ನಡುವೆಯೇ ಶುಕ್ರವಾರ ಬೆಳಗ್ಗೆ ಮತ್ತೆ ನಾಲ್ಕು ಕಡೆ ಸರಗಳ್ಳರು ತಮ್ಮ ಕೈಚಳಕ ತೋರಿಸಿದ್ದು ಪೊಲೀಸರ ತಲೆನೋವು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರೂ ಸರಗಳ್ಳರನ್ನು ಹಿಡಿಯಲು ಮುಂದಾಗಿದ್ದಾರೆ.
ಗುರುವಾರ ಬೆಳಗ್ಗೆ ಸರಣಿಯಾಗಿ ಕೃತ್ಯ ಎಸಗಿದ ಸರಗಳ್ಳರ ಸುಳಿವಿನ ಆಧಾರದ ಮೇಲೆ ಸಿಸಿಬಿ ಪೊಲೀಸರು ಹಾಗೂ ನಗರ ಪೊಲೀಸರ ತಂಡಗಳು ಮಹಾರಾಷ್ಟ್ರ ಹಾಗೂ ಬೆಳಗಾವಿಗೆ ತೆರಳಿವೆ. ಸ್ಥಳೀಯ ಪೊಲೀಸರ ವಿವಿಧ ತಂಡಗಳು ಕೂಡಾ ನಗರದಲ್ಲಿ ತೀವ್ರ ತಪಾಸಣೆಯಲ್ಲಿ ತೊಡಗಿವೆ. ಶುಕ್ರವಾರ ಬೆಳಗ್ಗೆ ನಗರದ ಸರಗಳ್ಳತನ ನಡೆಯಬಹುದಾದ ಉದ್ಯಾನಗಳು, ನಿರ್ಜನ ರಸ್ತೆಗಳ ಬಳಿ ಪೊಲೀಸರು ತೀವ್ರ ತಪಾಸಣೆ ನಡೆಸಿದ್ದಾರೆ.
ಈ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಗರ ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ,ಸರಗಳ್ಳರ ಹಾವಳಿ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಲ್ಲದೇ ಹಳೇ ಆರೋಪಿಗಳ ಬಗ್ಗೆ ತೀವ್ರ ನಿಗಾ ಇರಿಸುವಂತೆ ಸೂಚನೆ ನೀಡಿದ್ದಾರೆ. ಸರಗಳ್ಳತನ ನಿಯಂತ್ರಣಕ್ಕೆ ಸಂಚಾರ ಪೊಲೀಸರು ಕೈ ಜೋಡಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಪ್ರಮುಖ ಪ್ರದೇಶಗಳಲ್ಲಿ ನಾಕಾಬಂದಿ ಹಾಕಿ ಪೊಲೀಸರು 9,640 ವಾಹನಗಳ ತಡೆದು ದಾಖಲೆಗಳ ತಪಾಸಣೆ ನಡೆಸಿದರು. ಈ ವೇಳೆ ಸಂಚಾರ ನಿಯಮ ಉಲ್ಲಂಘನೆ ಸಂಬಂಧ 7,051 ಪ್ರಕರಣಗಳನ್ನು ದಾಖಲಿಸಲಾಗಿದೆ.ಸೂಕ್ತ ದಾಖಲೆಗಳಿಲ್ಲದ 87 ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಮುಂದುವರೆದ ಸರ ಅಪಹರಣ: ಎಚ್‍ಎಎಲ್‍ನ ದೊಡ್ಡನೆಕ್ಕುಂದಿ ಬಳಿ ಶುಕ್ರವಾರ ಬೆಳಗ್ಗೆ 10.30ರ ಸುಮಾರಿಗೆ ದೇವಸ್ಥಾನದಿಂದ ಹಿಂದಿರುಗುತ್ತಿದ್ದ ಇಂದಿರಾ (45) ಅವರ ಹಿಂದಿನಿಂದ ಬೈಕ್‍ನಲ್ಲಿ ಬಂದು ದುಷ್ಕರ್ಮಿಗಳಿಬ್ಬರು 100 ಗ್ರಾಂ ಸರ ಕಸಿದು ಪರಾರಿಯಾಗಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಬೆಳಗ್ಗೆ 11.15ರ ಸುಮಾರಿಗೆ ಮುನೇಕೊಳಲು ಬಳಿ ಮನೆ ಸಮೀಪ ನಾಯಿಗೆ ಆಹಾರ ಹಾಕುತ್ತಿದ್ದ ವೃದ್ಧೆ ರಾಜೇಶ್ವರಿ (60) ಅವರ 80 ಗ್ರಾಂ ಸರವನ್ನು ದುಷ್ಕರ್ಮಿಗಳು ಕಸಿದು ಪರಾರಿಯಾಗಿದ್ದಾರೆ. ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಈ ಎರಡೂ ಪ್ರಕರಣಗಳು ದಾಖಲಾಗಿವೆ. ಜೆಪಿ ನಗರದ 2ನೇ ಹಂತದಲ್ಲಿ ಮಧ್ಯಾಹ್ನ 2.30ರ ಸುಮಾರಿಗೆ ಭಾನುಮತಿ (62) ಮೊಮ್ಮಗನೊಂದಿಗೆ ಮನೆಯೊಳಗೆ ಪ್ರವೇಶಿಸುವ ಸಂದರ್ಭದಲ್ಲಿ ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಅವರ 60 ಗ್ರಾಂ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
45 ನಿಮಿಷಗಳ ಅಂತರದಲ್ಲಿ ಎಚ್‍ಎಎಲ್ ಹಾಗೂ ಜೆಪಿ ನಗರದಲ್ಲಿ 3 ಸರಗಳ್ಳತನ ನಡೆದಿದ್ದು ಒಂದೇ ತಂಡವೇ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶಂಕೆ ವ್ಯಕ್ತಪಡಿಸಿದ್ದಾರೆ. ನಾಪತ್ತೆ ನಿಗೂಢ: ದೇವಸ್ಥಾನಕ್ಕೆ ತೆರಳಿದ್ದ ಶಕುಂತಲಾ (56) ಎಂಬುವರ 50 ಗ್ರಾಂ ಚಿನ್ನದ ಸರ ನಿಗೂಢವಾಗಿ ನಾಪತ್ತೆಯಾಗಿದೆ. ಹಾಲು ಕೊಂಡು ಮನೆ ಬಳಿ ಬರುತ್ತಿದ್ದಂತೆ ನಿತ್ರಾಣಗೊಂಡು ಕೆಳಗೆ ಬಿದ್ದ ಅವರು ಎಚ್ಚರಗೊಂಡ ಬಳಿಕೆ ಕತ್ತಿನಲ್ಲಿದ್ದ ಚಿನ್ನದ ಸರ ಕಾಣೆಯಾಗಿತ್ತು. ಬಹುಶಃ ದುಷ್ಕರ್ಮಿಗಳು ಶಕುಂತಲಾ
ಅವರನ್ನು ತಳ್ಳಿ ಬೀಳಿಸಿ ಸರ ಕಸಿದು ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ.