ಬೆಂಗಳೂರು: ನಗರದಲ್ಲಿ ಸರಗಳವು ಮರುಕಳಿಸದಂತೆ ನೋಡಿಕೊಳ್ಳಬೇಕೆಂದು ಗೃಹ ಸಚಿವ ಕೆ.ಜೆ. ಜಾರ್ಜ್ ಅವರು ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಹೆಚ್ಚುತ್ತಿರುವ ಸರಗಳ್ಳತನದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಅವರು, ಸರಗಳವು ನಿಯಂತ್ರಿಸುವಲ್ಲಿ ಇನ್ನೂ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದ್ದಾರೆ. ಸರಗಳ್ಳರು ಹೊರ ರಾಜ್ಯದಿಂದ ಬಂದಿರುವ ಶಂಕೆ ಇರುವುದರಿಂದ ಹೊರ ರಾಜ್ಯದಿಂದ ನಗರಕ್ಕೆ ಬರುವವರ ಮೇಲೆ ನಿಗಾ ವಹಿಸಬೇಕು. ವಿಶೇಷವಾಗಿ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ವಾಯು ವಿಹಾರ ಮಾಡುವಾಗ ಅಲ್ಲಲ್ಲಿ ಪೊಲೀಸರು ನಿಗಾ ವಹಿಸಬೇಕು. ಜನಸಂದಣಿ ಇರುವ ಜಾಗದಲ್ಲಿ ಪೊಲೀಸರು ಮಫ್ತಿಯಲ್ಲಿ ಹೋಗಿ ಕಳ್ಳರನ್ನು ಪತ್ತೆ ಹಚ್ಚಬೇಕು ಎಂದು ಶುಕ್ರವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಹೇಳಿದ್ದಾರೆಂದು ತಿಳಿದುಬಂದಿದೆ.
ಸರಗಳ್ಳತನ ನಡೆದರೆ ಅದಕ್ಕೆ ಆಯಾ ಠಾಣಾ ವ್ಯಾಪ್ತಿ ಇನ್ಸ್ ಪೆಕ್ಟರ್‍ಗಳನ್ನೇ ಹೊಣೆ ಮಾಡಿ ಕ್ರಮಕೈಗೊಳ್ಳಲಾಗುತ್ತದೆ ಎಂದು ಹಿಂದಿನ ಸಭೆಯಲ್ಲಿ ಎಚ್ಚರಿಸಲಾಗಿತ್ತು. ಆದರೂ ಇನ್ಸ್ ಪೆಕ್ಟರ್ ಗಳು ಗಂಭೀರವಾಗಿ ಪರಿಗಣಿಸಿರುವಂತೆ ಕಾಣುತ್ತಿಲ್ಲ. ಆದ್ದರಿಂದ ಇನ್ನುಮುಂದೆ ಸರಗಳವು ಹೆಚ್ಚಾದರೆ ಗಂಭೀರ ಕ್ರಮ ಕೈಗೊಳ್ಳುವುದು ಖಚಿತ ಎಂದು ಜಾರ್ಜ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಸರಗಳವು ಮತ್ತು ಮನೆಗಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಸರಗಳ್ಳತನ ಹೆಚ್ಚುತ್ತಿದ್ದು, ಇದನ್ನು ನಿಯಂತ್ರಿಸಿ ಜನರ ಭೀತಿ ನಿವಾರಣೆ ಮಾಡಬೇಕಿದೆ ಎಂದು ಹೇಳಿದ್ದಾರೆ.
ಗೃಹ ಇಲಾಖೆಯಲ್ಲಿ ಆಡಳಿತ ಮತ್ತು ಸೇವೆಗೆ ಸಂಬಂಧಿಸಿದಂತೆ ಹೆಚ್ಚಿನ ಪ್ರಮಾಣದ ಕಡತಗಳು ಬಾಕಿ ಉಳಿದಿದ್ದು, ಅವುಗಳ ವಿಲೇವಾರಿ ವಿಳಂಬವಾಗಿ ಇಲಾಖೆ ಕೆಲಸಕ್ಕೆ ತೊಂದರೆಯಾಗಿದೆ. ಆದ್ದರಿಂದ ಕೂಡಲೇ ಕಡತಗಳನ್ನು ವಿಲೇವಾರಿ ಮಾಡಬೇಕು ಎಂದು ಗೃಹಸಚಿವರು ಸೂಚಿಸಿದ್ದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.