ಬೆಂಗಳೂರು: ಕ್ಯಾನ್ಸರ್ ಚಿಕಿತ್ಸೆಯಲ್ಲಿ ತಾಂತ್ರಿಕತೆ ಜೊತೆಗೆ ಮಾನವೀಯತೆಯ ಚಿಕಿತ್ಸೆಯನ್ನು ದಾದಿಯರು ನೀಡಬೇಕಿದೆ ಎಂದು ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಹೇಳಿದರು.
ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ಆವರಣದಲ್ಲಿರುವ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡೀಸ್(ನಿಯಾಸ್)ನಲ್ಲಿ ಖಾಸಗಿ ಆಸ್ಪತ್ರೆಯೊಂದು ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರೀಯ ಕ್ಯಾನ್ಸರ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಕ್ಯಾನ್ಸರ್ ಚಿಕಿತ್ಸೆಯಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಹಲವು ಸಂಶೋಧನೆಗಳಾಗುತ್ತಿವೆ. ನರ್ಸಿಂಗ್ ವೃತ್ತಿಯವರು ಇದನ್ನು ತಿಳಿದುಕೊಂಡರೆ ಚಿಕಿತ್ಸೆಗೆ ಸಹಕಾರಿಯಾಗುತ್ತದೆ ಎಂದು ಕಿವಿಮಾತು ಹೇಳಿದರು.
ಸವಾಲುಗಳೇನು?: ಇಂದಿನ ಜೀವನ ಶೈಲಿಯೇ ಕ್ಯಾನ್ಸರ್ ಒಳಗೊಂಡಂತೆ ಹಲವು ರೋಗಗಳಿಗೆ ಕಾರಣ. ರೋಗಿಯ ಕೌಟುಂಬಿಕ ಹಿನ್ನೆಲೆ ಅರಿತುಕೊಂಡು, ಅವರ ಮಾನಸಿಕ ಸ್ವಾಸ್ಥ್ಯವನ್ನೂ ಸುಧಾರಿಸಬೇಕಿದೆ. ಏಕೆಂದರೆ, ಕ್ಯಾನ್ಸರ್ ರೋಗ ವ್ಯಕ್ತಿಯ ಸಾಮಾಜಿಕ, ಕೌಟುಂಬಿಕ ಹಾಗೂ ಆರ್ಥಿಕ ವಿಚಾರಗಳ ಮೇಲೂ ಪ್ರಭಾವ ಬೀರುತ್ತದೆ. ಚಿಕಿತ್ಸೆ ನೀಡುವಾಗ ದಾದಿಯರು ಈ ಎಲ್ಲಾ ಅಂಶಗಳತ್ತ ಗಮನಹರಿಸಬೇಕು ಎಂದರು.