ಬೆಂಗಳೂರು: ಗಣಿಗಾರಿಕೆಯಿಂದ ಬಾಧಿತವಾದ ರಾಜ್ಯದ ಮೂರು ಜಿಲ್ಲೆಗಳಲ್ಲಿ ಪರಿಸರ ಸಂರಕ್ಷಣೆ ಕಾರ್ಯಕ್ಕಾಗಿ ಸರ್ಕಾರ ರು. 2000 ಕೋಟಿ ಮೊತ್ತದ ಕ್ರಿಯಾ ಯೋಜನೆಯನ್ನು ಸುಪ್ರೀಂ ಕೋರ್ಟ್‍ಗೆ ಸಲ್ಲಿಸಲಾಗಿದೆ.
ಸರ್ವೋಚ್ಛ ನ್ಯಾಯಾಲಯದ ಒಪ್ಪಿಗೆ ದೊರೆತ ತಕ್ಷಣ ಸಿ ಕೆಟಗರಿಯ 15 ಗಣಿಗಳ ಹರಾಜು ಪ್ರಕ್ರಿಯೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅಸೋಚೋಮ್ ಮತ್ತು ಜೆಎಸ್‍ಡಬ್ಲ್ಯು ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ನಡೆದ ಕರ್ನಾಟಕದಲ್ಲಿ ಗಣಿಗಾರಿಕೆ ಮತ್ತು ಉತ್ಪಾದನಾ ಹೆಚ್ಚಳ ಸಮಾ್ವೇಶದಲ್ಲಿ ಮಾತನಾಡಿದರು. ಸಿ ಕೆಟಗರಿ ಗಣಿಗಳ ಹರಾಜು ಪ್ರಕ್ರಿಯೆಗೆ ಸಂಬಂಧಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಗೆ ವಿಸ್ತ್ರತ ವರದಿ ಸಲ್ಲಿಸಿದೆ. 15 ಗಣಿಗಳನ್ನು ರಾಜ್ಯ ಸರ್ಕಾರ ಹರಾಜು ಮಾಡುವುದಕ್ಕೆ ನಿರ್ಧರಿಸಿದೆ. ಈ ಪೈಕಿ 11 ಗಣಿಗಳಿಗೆ ಸಂಬಂಧಿಸಿದ ವರದಿ ಲಭ್ಯವಾಗಿದ್ದು, 4 ಗಣಿಗಳ ವಿವರ ನೀಡಬೇಕಿದೆ. ಇದಕ್ಕೆ ಸುಪ್ರೀಂ ಕೋರ್ಟ್ ಒಪ್ಪಿಗೆ ದೊರೆತ ತಕ್ಷಣ ಹರಾಜು ಪ್ರಕ್ರಿಯೆ ಆರಂಭಿಸಲಾಗುವುದು ಎಂದರು.
ಗಣಿಗಾರಿಕೆಯಿಂದ ಪರಿಸರ ಸಂಬಂಧಿ ಸಮಸ್ಯೆ ಎದುರಿಸುತ್ತಿರುವ ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ ಪರಿಸರ ಸಂರಕ್ಷಣಾ ಕಾರ್ಯಕ್ರಮ ನಡೆಸುವುದಕ್ಕಾಗಿ ರಾಜ್ಯ ಸರ್ಕಾರ ಕರ್ನಾಟಕ ಮೈನಿಂಗ್ ಎನ್ವಿರಾನ್ ಮೆಂಟ್ ರಿಸ್ಟೋರೇಷನ್ ಕಾರ್ಪೊರೇಷನ್ (ಕೆಎಂಇಆರ್‍ಸಿ) ಸ್ಥಾಪನೆ ಮಾಡಿದೆ. ಸಂರಕ್ಷಣಾ ಕಾರ್ಯಕ್ಕಾಗಿ ರು. 2000 ಕೋಟಿ ಮೊತ್ತದ ಕ್ರಿಯಾ ಯೋಜನೆಯನ್ನು ಸುಪ್ರೀ ಕೋರ್ಟ್‍ಗೆ ಸಲ್ಲಿಸಲಾಗಿದ್ದು, ನ್ಯಾಯಾಲಯದ ಒಪ್ಪಿಗೆಗಾಗಿ ಕಾಯುತ್ತಿದ್ದೇವೆ. ದೇಶದಲ್ಲೇ ಇಷ್ಟೊಂದುಬೃಹತ್ ಪ್ರಮಾಣದ ಪರಿಸರ ಸಂರಕ್ಷಣಾ ಯೋಜನೆಯನ್ನು ಯಾವ ರಾಜ್ಯವೂ ಅನುಷ್ಠಾನ ಮಾಡುತ್ತಿಲ್ಲ ಎಂದರು.
ವಾರ್ಷಿಕ 30 ಮಿಲಿಯನ್ ಟನ್ ಕಬ್ಬಿಣದ ಅದಿರು ಉತ್ಪಾದನೆ ಮಾಡುವಂತೆ ಸುಪ್ರೀಂ ಕೋರ್ಟ್ ರಾಜ್ಯಕ್ಕೆ ಮಿತಿ ವಿಧಿಸಿದೆ. ಇದರ ಆಧಾರದ ಮೇಲೆಯೇ ಗಣಿ ಉದ್ಯಮದ ಮೌಲ್ಯವರ್ಧನೆಗೆ ಸರ್ಕಾರ ಸಾಕಷ್ಟು ಕ್ರಮ ತೆಗೆದುಕೊಂಡಿದೆ. 2013-14ರಲ್ಲಿ 23 ಮಿಲಿಯನ್ ಟನ್, 2014-15ರಲ್ಲಿ 26 ಮಿಲಿಯನ್ ಟನ್ ಅದಿರು ಉತ್ಪಾದನೆ ಮಾಡಲಾಗಿದೆ. ಇದರಲ್ಲಿ ಎಂಎನ್‍ಡಿಸಿ ಮತ್ತು ಎಂಎಂಎಲ್ ಉತ್ಪಾದನೆಯೂ ಸೇರಿದೆ ಎಂದು ವಿವರಿಸಿದರು.
ಐಬಿಎಂ ಅಂದಾಜಿನ ಪ್ರಕಾರ ರಾಜ್ಯದಲ್ಲಿ 2268.8 ಮಿಲಿಯನ್ ಟನ್ ಸಾಮರ್ಥ್ಯದ ಕಬ್ಬಿಣದ ಅದಿರು ನಿಕ್ಷೇಪ ಇದೆ. ದೇಶದಲ್ಲಿ ಕರ್ನಾಟಕ ನಾಲ್ಕನೇ ದೊಡ್ಡ ಖನಿಜ ನಿಕ್ಷೇಪ ಹೊಂದಿದ ರಾಜ್ಯ. ದೇಶದ ಒಟ್ಟು ಚಿನ್ನದ ನಿಕ್ಷೇಪದ ಶೇ.48.43ರಷ್ಟು ಕರ್ನಾಟಕದಲ್ಲಿದೆ ಎಂದು ಅಂದಾಜಿಸಲಾಗಿದೆ ಎಂದರು. ಕೇಂದ್ರ ಸರ್ಕಾರದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಕಾರ್ಯದರ್ಶಿ ಡಾ.ಅನುಪ್ ಕೆ.ಪೂಜಾರಿ ಮಾತನಾಡಿ, ಗಣಿಗಾರಿಕೆ ಎಂದರೆ ಕೇವಲ ಕಬ್ಬಿಣದ ಅದಿರು ಉತ್ಪಾದನೆ ಎಂಬ ಪರಿಸ್ಥಿತಿ ಕರ್ನಾಟಕದಲ್ಲಿದೆ. ಆದರೆ ಗಣಿ ಎಂಬುದು ವಿಶಾಲ ಕ್ಷೇತ್ರ. ಎಲ್ಲ ನಿಕ್ಷೇಪಗಳಿಗೂ ಅನ್ವಯವಾಗುವಂತೆ ಕೇಂದ್ರ ಸರ್ಕಾರ ಕಾಯ್ದೆ ತಿದ್ದುಪಡಿ ಮಾಡಿದೆ. ಆದಾಗಿಯೂ ಕರ್ನಾಟಕ ಗಣಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಕಳೆದ ಮೂರು ವರ್ಷದ ಅವಧಿಯಲ್ಲಿ ಅಕ್ರಮ ಗಣಿಗಾರಿಕೆ ಪ್ರಮಾಣ ಭಾರಿ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಂದಿದೆ ಎಂದರು.
ರಾಜ್ಯ ಸರ್ಕಾರ ಅದಿರು ಉತ್ಪಾದನೆಯನ್ನು ಕೇವಲ ಆಂತರಿಕ ಬಳಕೆಗೆ ಮಾತ್ರ ನಿಗದಿ ಮಾಡಿ ನೀತಿ ಜಾರಿಗೊಳಿಸುವುದು ಸಮಂಜಸವಲ್ಲ. ನಾವು ಮೇಕ್ ಇನ್ ಇಂಡಿಯಾ ಮಂತ್ರ ಪಠಿಸುವಾಗ ಉತ್ಪಾದನೆ, ಬಳಕೆ ಕೇವಲ ಒಂದೇ ರಾಜ್ಯಕ್ಕೆ ಸೀಮಿತವಾಗುವುದಿಲ್ಲ. ಇದಕ್ಕೆ ಮಂಗಳೂರು ಬೀಡಿ ಒಂದು ಜ್ವಲಂತ ಉದಾಹರಣೆ. ಮಂಗಳೂರಿನಲ್ಲಿ ಬೀಡಿ ಎಲೆ, ತಂಬಾಕು ಉತ್ಪಾದನೆಯಾಗುವುದಿಲ್ಲ. ಬೀಡಿ ಬಳಕೆದಾರರೂ ಇಲ್ಲ. ಬೇರೆ ಬೇರೆ ರಾಜ್ಯಗಳಿಂದ ಪೂರೈಕೆಯಾಗುವ ವಸ್ತುವನ್ನು ಆಧರಿಸಿ ಉತ್ಪಾದನೆಗೆ ಮೌಲ್ಯವರ್ಧನೆ ನೀಡಲಾಗಿದೆ. ಅದೇ ರೀತಿ ಗಣಿಗಾರಿಕೆಯೂ ನಡೆಯುತ್ತದೆ. ಹೊಸ ಕಾಯ್ದೆ ಪ್ರಕಾರ ಗಣಿ ಪರವಾನಗಿ ನೀಡುವುದರಲ್ಲಿ ಕೇಂದ್ರದ ಪಾತ್ರ ಏನೂ ಇಲ್ಲ. ಅಗತ್ಯ ನಿಯಮಗಳನ್ನು ಪೂರೈಸಿದರೆ ರಾಜ್ಯ ಸರ್ಕಾರವೇ ಅನುಮತಿ ನೀಡುತ್ತದೆ ಎಂದರು.
ವ್ಯತಿರಿಕ್ತ ಮಾಹಿತಿ:
ಮುಖ್ಯಮಂತ್ರಿ ಮತ್ತು ಗಣಿ ಉದ್ಯಮಿಗಳು ನೀಡಿದ ಉತ್ಪಾದನಾ ಮಾಹಿತಿಯಲ್ಲಿ ಭಾರಿ ಏರುಪೇರು ಕಂಡು ಬಂದಿದೆ. 2013-14ರಲ್ಲಿ 23 ಮಿಲಿಯನ್ ಟನ್, 2014-15ರಲ್ಲಿ 26 ಮಿಲಿಯನ್ ಟನ್ ಕಬ್ಬಿಣದ ಅದಿರು ಉತ್ಪಾದನೆಯಾಗಿದೆ ಎಂಬುದು ಸಿಎಂ ಮಾಹಿತಿ. ಆದರೆ ಜೆಎಸ್‍ಡಬ್ಲ್ಯು ಜಂಟಿ ನಿರ್ದೇಶಕ ಎಂ.ವಿ.ಎಸ್ ಶೇಷಗಿರಿ ರಾವ್ ಮಾತನಾಡಿ, 2014-15ರಲ್ಲಿ ಕೇವಲ 19 ಮಿಲಿಯನ್ ಟನ್ ಮಾತ್ರ ಉತ್ಪಾದನೆಯಾಗಿದೆ. ವಾರ್ಷಿಕ 35 ಮಿಲಿಯನ್ ಟನ್ ಕಬ್ಬಿಣದ ಅದಿ ರು ಉದ್ಯಮದ ಅಗತ್ಯವಾಗಿದೆ. ಇದು ದೇಶದ ಒಟ್ಟು ಉತ್ಪನ್ನದ ಶೇ.20ರಷ್ಟಾಗುತ್ತದೆ. ಕಳೆದ ವರ್ಷ ಆಗಿರುವುದು ದೇಶದ ಒಟ್ಟು ಉತ್ಪಾದನೆಯ ಶೇ.13.5ರಷ್ಟು ಮಾತ್ರ ಎಂದರು. ಸಚಿವರಾದ ಬಿ.ರಮಾನಾಥ್ ರೈ, ಟಿ.ಬಿ.ಜಯಚಂದ್ರ, ಅಸೋಚೋಮ್ ನ ಡಾ.ಸಿ.ಮನೋಹರ್ ಭಾಗವಹಿಸಿದ್ದರು.