ಬೆಂಗಳೂರು:ಪೊಲೀಸ್ ನೇಮಕದಲ್ಲಿ ಮಹಿಳೆಯರಿಗೆ ಶೇ.20ರಷ್ಟು ಪ್ರಾತಿನಿಧ್ಯ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಪೊಲೀಸ್ ನೇಮಕದಲ್ಲಿ ಈವರೆಗೂ ಮಹಿಳೆಯರಿಗೆ ಶೇ.10ರಷ್ಟು ಮಾತ್ರ ಪ್ರಾತಿನಿಧ್ಯ ನೀಡಲಾಗುತ್ತಿತ್ತು. ಇನ್ನುಮುಂದೆ ಇದನ್ನು ಶೇ.20ಕ್ಕೆ ಹೆಚ್ಚಿಸಲಾಗುವುದು. ಈ ವರ್ಷ 850 ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗುತ್ತಿದ್ದು, ಇದರಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಅವರು ವಿವರಿಸಿದರು.
ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ರಾಜ್ಯದಲ್ಲಿರುವ ಪೊಲೀಸ್ ಠಾಣೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಈ ವರ್ಷ 35 ಹೊಸ ಠಾಣೆಗಳನ್ನು ಹೊಸದಾಗಿ ನಿರ್ಮಿಸಲಾಗುತ್ತಿದೆ. ಹಾಗೆಯೇ11,500 ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸಲಾಗುತ್ತಿದೆ. ಇಷ್ಟೇ ಅಲ್ಲದೆ. ಪೊಲೀಸರಿಗೆ ನೀಡುತ್ತಿದ್ದ ರಜೆ ಭತ್ಯವನ್ನು ರು. 100ರಿಂದ ರು.400ಕ್ಕೆ ಹೆಚ್ಚಿಸಲಾಗಿದ್ದು, ಗೃಹ ರಕ್ಷಕ ದಳಕ್ಕೂ ಭತ್ಯೆ ಏರಿಕೆ ಮಾಡಲಾಗುತ್ತಿದೆ ಎಂದು ಜಾರ್ಜ್ ತಿಳಿಸಿದರು.