ಬೆಂಗಳೂರು: 2013ರಲ್ಲಿ ಮಲ್ಲೇಶ್ವರಂನ ಬಿಜೆಪಿ ಕಚೇರಿ ಮುಂದೆ ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಲೀಶಾ ಎಂಬ ಯುವತಿಗೆ ಸರ್ಕಾರದ ವತಿಯಿಂದ ರು. 8.2ಲಕ್ಷ ಪರಿಹಾರ ನೀಡಿರುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್‍ಗೆ ಮಾಹಿತಿ ನೀಡಿದೆ.
ಅಂದು ನಡೆದ ಬಾಂಬ್ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದು ಆಕೆ ಸರ್ಕಾರದಿಂದ ರು. 1 ಕೋಟಿ ಪರಿಹಾರ ನೀಡುವಂತೆ ಕೋರಿ ಲೀಶಾ ಹೈಕೋರ್ಟ್‍ನಲ್ಲಿ ಅರ್ಜಿ ದಾಖಲಿಸಿದ್ದರು. ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್. ಪೊನ್ನಣ್ಣ ವಾದ ಮಂಡಿಸಿ, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ರು. 6.24 ಲಕ್ಷ ಮತ್ತು ರಾಜ್ಯ ಸರ್ಕಾರದ ಭಯೋತ್ಪಾದನೆ ಮತ್ತು ನಕ್ಸಲ್ ದಾಳಿಗೆ ತುತ್ತಾದ ಸಂತ್ರಸ್ಥರ ಪರಿಹಾರ ನಿಧಿಯಿಂದ ರು. 2 ಲಕ್ಷ ನೀಡಲಾಗಿದೆ. ಭಯೋತ್ಪಾದನೆ ದಾಳಿಗೆ ತುತ್ತಾದ ಸಂತ್ರಸ್ಥರಿಗೆ ಕೇಂದ್ರ ಸರ್ಕಾರ ರು. 3 ಲಕ್ಷದ ವರೆಗೂ ಪರಿಹಾರ ನೀಡಲು ಅವಕಾಶವಿದ್ದು, ಈ ಕುರಿತು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಹೈಕೋರ್ಟ್ ಮಾಹಿತಿ ನೀಡಿದರು.
ವಿಚಾರಣೆ ನಡೆಸಿದ ನ್ಯಾ. ಎ.ಎಸ್. ಬೋಪಣ್ಣ ಅವರಿದ್ದ ಏಕಸದಸ್ಯ ಪೀಠ, ಪರಿಹಾರ ನೀಡುವ ಸಂಬಂಧ ಮುಂದಿನ ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಗೃಹ ಸಚಿವ ಇಲಾಖೆ ತನ್ನ ನಿಲುವು ಏನೆಂಬುದನ್ನು ಸ್ಪಷ್ಟಪಡಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿದೆ.
ಅರ್ಜಿದಾರರ ವಾದವೇನು?: ಬಾಂಬ್ ಸ್ಫೋಟವಾದ ನಂತರ ಚಿಕಿತ್ಸಾ ವೆಚ್ಚಕ್ಕೆಂದು ಸರ್ಕಾರ ಕೇವಲ ರು. 3 ಲಕ್ಷ ಪರಿಹಾರ ನೀಡಿತ್ತು. ಈಗಿರುವ ಪರಿಸ್ಥಿತಿಯಲ್ಲಿ ಮತ್ತಷ್ಟು ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಾದ ಅನಿವಾರ್ಯತೆ ಇದೆ. ಇದಕ್ಕಾಗಿ ಸಾಕಷ್ಟು ಹಣ ವೆಚ್ಚವಾಗಲಿದ್ದು, ಪೋಷಕರು ಇದನ್ನು ಭರಿಸಲು ಅಸಾಧ್ಯ. ವಾಗುವುದಾಗಿ ಲಿಶಾ ಅರ್ಜಿಯಲ್ಲಿ ತನ್ನ ಅಳಲನ್ನು ತೋಡಿಕೊಂಡಿದ್ದಳು.
ಅಲ್ಲದೇ ಈ ರೀತಿಯಾಗಿ ಭಯೋತ್ಪಾದಕ ದಾಳಿಗೆ ತುತ್ತಾದವರಿಗೆ ಪರಿಹಾರ ನೀಡಲು ರಾಷ್ಟ್ರೀಯ ನೀತಿ ರೂಪಿಸುವಂತೆಯೂ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಳು.