ಮೈಸೂರು: ಉತ್ತರಾಖಂಡದ ಹನುಮಾನ್ ಘಾಟ್ ಎಂಬಲ್ಲಿ ಮಳೆ ಹಾಗೂ ಭೂಕುಸಿತದಿಂದಾಗಿ ಸಂತ್ರಸ್ತರಾಗಿದ್ದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಎಲ್ಲಾ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ. ಅಲ್ಲಿಂದ ವಿಶೇಷ ವಾಹನದಲ್ಲಿ ಹರಿದ್ವಾರದ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಇದೇ ವೇಳೆ ಭಾರತ ಮತ್ತು ಟಿಬೆಟ್ ಗಡಿ ಪ್ರದೇಶದ ಹನುಮಾನ್ ಘಾಟ್ ಸಮೀಪ ಭೂಕುಸಿತ ಉಂಟಾಗಿ ರಸ್ತೆ ಸಂಪರ್ಕ ಕಡಿದು ಹೋಗಿದೆ. ಅದರಲ್ಲಿ ಮೈಸೂರು ಚಾಮರಾಜನಗರ ಜಿಲ್ಲೆಯ ಸುಮಾರು 25 ಮಂದಿ ಸೇರಿದಂತೆ ಸುಮಾರು 200 ಕ್ಕೂ ಹೆಚ್ಚು ಕನ್ನಡಿಗರು ಸಿಲುಕಿಕೊಂಡಿದ್ದಾರೆ.
ಇಂಡೋ- ಟಿಬೆಟ್ ಗಡಿ ಸಮೀಪ ಭಾರಿ ಭೂಕುಸಿತ ಉಂಟಾಗಿ ಸಿಕ್ಕಿಹಾಕಿಕೊಂಡಿದ್ದ ಮೈಸೂರು, ಚಾಮರಾಜನಗರ ಜಿಲ್ಲೆಯ ಸುಮಾರು 25 ಮಂದಿ ಮಧ್ಯರಾತ್ರಿ ವೇಳೆಗೆ ಪ್ಯೂಪಲ್ ಕೋರ್ಟ್ ಎಂಬಲ್ಲಿಗೆ ಸೇನಾ ವಾಹನದಲ್ಲಿ ತಲುಪಿದ್ದಾರೆ. ಇದಕ್ಕೂ ಮೊದಲು ಸುಮಾರು 10 ಕಿ.ಮೀ ದೂರ ದುರ್ಗಮ ದಾರಿಯಲ್ಲಿ ನಡೆದು ನಂತರ ವಾಹನದಲ್ಲಿ ಪ್ರಯಾಣ ಮುಂದುವರೆಸಿದರು. ಉತ್ತರ ಭಾರತ ಪ್ರವಾಸದಲ್ಲಿದ್ದ ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಮತ್ತು ಕುಟುಂಬ, ನಗರದ ಅರಮನೆ ಪುರೋಹಿತ ಶ್ರೀಹರಿ ದೀಕ್ಷಿತ್ ಮತ್ತು ಅವರ ಕುಟುಂಬ, ಚಾಮರಾಜನಗರ ನಗರಸಭೆ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಗಣೇಶ್ ದೀಕ್ಷಿತ್ ಮತ್ತು ಅವರ ಕುಟುಂಬ ಸೇರಿದಂತೆ ಸುಮಾರು 25 ಮಂದಿ ಪ್ರವಾಹದಲ್ಲಿ ಸಿಲುಕಿದ್ದರು.
ತೀವ್ರ ಮಳೆಯಿಂದಾಗಿ ಸಂಪರ್ಕ ಕಡಿದುಕೊಂಡಿರುವ ಉತ್ತರಾಖಂಡದಲ್ಲಿ ಸಿಕ್ಕಿಬಿದ್ದಿರುವ ಕರ್ನಾಟಕದ ಯಾತ್ರಾರ್ಥಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಿದೆ.