ಬೆಂಗಳೂರು: ಜೆಡಿಎಸ್‍ನ್ನು ಪ್ರಬಲ ಪ್ರಾದೇಶಿಕ ಪಕ್ಷವನ್ನಾಗಿಸಲು ರಾಜ್ಯಾದ್ಯಂತ ಹೋರಾಟ ಮಾಡಿ, ಸಂಘಟನೆ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಪುನರುಚ್ಚರಿಸಿದ್ದಾರೆ.
ನಗರದ ಕೃಷ್ಣ ಫ್ಲೋರ್ ಮಿಲ್ ಬಳಿ ಬಿಬಿಎಂಪಿ ಮಂಜೂರು ಮಾಡಿರುವ ನಿವೇಶನದಲ್ಲಿ ಜೆಡಿಎಸ್‍ನ ನೂತನ ಕಚೇರಿಗೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಗೆ ಸರಿಸಮನಾಗಿ ಪ್ರಬಲವಾಗಿ ರಾಜ್ಯದಲ್ಲಿ ಜೆಡಿಎಸ್ ಹೊರಹೊಮ್ಮಬೇಕಿದೆ. ಇದಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ಕಾರ್ಯಕರ್ತರನ್ನು ಸಂಘಟಿಸುತ್ತೇನೆ. ಎಲ್ಲರನ್ನೂ ಒಗ್ಗೂಡಿಸಿ ಪಕ್ಷವನ್ನು ಬಲಪಡಿಸುತ್ತೇನೆ.
ಈ ಉದ್ದೇಶದಿಂದಲೇ ಇಳಿ ವಯಸ್ಸಿನಲ್ಲೂ ಹೋರಾಟಕ್ಕೆ ಮುಂದಾಗಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಪಕ್ಷದ ಕಚೇರಿ ನೀಡಿರುವುದಕ್ಕೆ ಮೇಯರ್ ಶಾಂತಕುಮಾರಿ, ಉಪ ಮೇಯರ್ ರಂಗಣ್ಣ ಹಾಗೂ ಬಿಬಿಎಂಪಿ ಸದಸ್ಯರಿಗೆ ನಾನು ಆಭಾರಿಯಾಗಿದ್ದೇನೆ. ಸಚಿವ ದಿನೇಶ್ ಗುಂಡೂರಾವ್, ಕಾರ್ಪೋರೇಟರ್ ಮಲ್ಲೇಶ್ ಕಚೇರಿಗೆ ನಾನು ಈ ಇಳಿವಯಸ್ಸಿನಲ್ಲೂ ಹುಡುಕಾಟ ನಡೆಸುವುದು ಸರಿಯಲ್ಲ ಎಂದು ಈ ನಿವೇಶನ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಬಿಬಿಎಂಪಿ ಈ ನಿವೇಶನವನ್ನು ಐದು ವರ್ಷದ ಭೋಗ್ಯಕ್ಕೆನೀಡಿದೆ. ಪ್ರತಿ ತಿಂಗಳು 12 ಸಾವಿರ ಬಾಡಿಗೆ ನಿಗದಿಯಾಗಿದೆ. 39 ಗುಂಟೆಯಲ್ಲಿ ಕಚೇರಿ ನಿರ್ಮಿಸಲಾಗುತ್ತದೆ. ಐದು ವರ್ಷದ ನಂತರ ಅದನ್ನು ಮುಂದುವರಿಸುವುದು ಸರ್ಕಾರಕ್ಕೆ ಬಿಟ್ಟ ವಿಚಾರ ಎಂದರು. ಶಾಸಕರಾದ ಗೋಪಾಲಯ್ಯ, ಅಖಂಡ ಶ್ರೀನಿವಾಸಮೂರ್ತಿ, ಮಾಜಿ ಶಾಸಕ ಬಂಡೆಪ್ಪ ಕಾಶಂಪೂರ್ ಹಾಜರಿದ್ದರು.