ಬೆಂಗಳೂರು: ಬೆಂಗಳೂರು ಪೊಲೀಸರ ಕೆಲಸ ಇನ್ನು ಮುಂದೆ ಯೂಟ್ಯೂಬ್‌ನಲ್ಲೂ ಲಭ್ಯ...!
ಕಳೆದ ಒಂದೆರಡು ವರ್ಷಗಳಿಂದ ಫೇಸ್‌ಬುಕ್ ಹಾಗೂ ಟ್ವಿಟರ್ ಮೂಲಕ ಜನರನ್ನು ತಲುಪುತ್ತಿದ್ದ ನಗರ ಪೊಲೀಸರು ತಮ್ಮ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ಪ್ರಸರಿಸಲು ಯೂಟ್ಯೂಬ್ ಮೊರೆ ಹೋಗಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ, ಈಗಾಗಲೇ ಸಾಮಾಜಿಕ ತಾಣಗಳಲ್ಲಿ ಜನರೊಂದಿಗೆ ಸಂಪರ್ಕ ಹೊಂದಿದ್ದೇವೆ. ಇದರ ಮುಂದುವರೆದ ಭಾಗ ಯೂಟ್ಯೂಬ್ ಬಳಕೆ ಎಂದರು. ಪ್ರಕರಣದ ತನಿಖೆ, ಮಹಿಳೆ ಮತ್ತು ಮಕ್ಕಳ ರಕ್ಷಣೆ ಕುರಿತು ಜಾಗೃತಿ ಸಂದೇಶಗಳು, ಸಂಚಾರ ನಿಯಮಗಳ ಪಾಲನೆ ಸೇರಿದಂತೆ ಪೊಲೀಸರ ದೈನಂದಿನ ಚಟುವಟಿಕೆಗಳನ್ನು ವೀಕ್ಷಿಸಬಹುದಾಗಿದೆ.
ಬೆಳಗ್ಗೆ 10 ರಿಂದ ಸಂಜೆ 5.30ವರೆಗೆ ನಿರಂತರವಾಗಿ ಮಾಹಿತಿ ಅಪ್‌ಡೇಟ್ ಮಾಡಲು ವ್ಯವಸ್ತೆ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ಆಯುಕ್ತರು ಹೇಳಿದರು.