ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಮೇಕೆದಾಟು ಬಳಿ ಅಣೆಕಟ್ಟೆ ನಿರ್ಮಾಣಕ್ಕೆ ತಮಿಳುನಾಡಿನ ವಿರೋಧ

ಮೇಕೆದಾಟು- ಸಂಗಮ ಬಳಿ ಕಾವೇರಿ ನದಿಗೆ ಅಣೆಕಟ್ಟೆ ನಿರ್ಮಾಣ ವಿರೋಧಿಸಿ ಬೃಹತ್ ಪ್ರತಿಭಟನಾ ರ್ಯಾಲಿಗೆ ಮುಂದಾದ ತಮಿಳು ನಾಡಿನ 1800ಕ್ಕೂ ಹೆಚ್ಚು...

ಮೇಕೆದಾಟು
Mainashree
Updated On : 8 Mar 2015, 2:35 am

ಸಾತನೂರು/ರಾಮನಗರ: ಮೇಕೆದಾಟು- ಸಂಗಮ ಬಳಿ ಕಾವೇರಿ ನದಿಗೆ ಅಣೆಕಟ್ಟೆ ನಿರ್ಮಾಣ ವಿರೋಧಿಸಿ ಬೃಹತ್ ಪ್ರತಿಭಟನಾ ರ್ಯಾಲಿಗೆ ಮುಂದಾದ ತಮಿಳು ನಾಡಿನ 1800ಕ್ಕೂ ಹೆಚ್ಚು ರೈತರನ್ನು ಅಲ್ಲಿನ ಪೊಲೀಸರು ಶನಿವಾರ ಬಂಧಿಸಿ, ಬಿಡುಗಡೆಗೊಳಿಸಿದ್ದಾರೆ.

ರಾಮನಗರ ಜಿಲ್ಲೆಯ ಮೇಕೆದಾಟು-ಸಂಗಮ ಬಳಿ ಕರ್ನಾಟಕ ಸರ್ಕಾರವು ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಾಣ ಸಂಬಂಧ ಅಧಿಕೃತ ಘೋಷಣೆ ಹೊರಡಿಸುವ ಮುನ್ನವೇ ಇದನ್ನು ತಮಿಳುನಾಡು ರೈತರು ರಾಷ್ಟ್ರೀಯ ವಿವಾದವನ್ನಾಗಿ ಸೃಷ್ಟಿಸಲು ಸಂಚು ನಡೆಸಿದ್ದಾರೆ. ಮೇಕದಾಟು- ಸಂಗಮ ಬಳಿ ಅಣೆಕಟ್ಟೆ ನಿರ್ಮಾಣವಾದಲ್ಲಿ ತಮಿಳುನಾಡು ಪಾಲಿನ ನೀರು ಬಿಡುಗಡೆಗೆ ಅಡ್ಡಿಯಾಗುತ್ತದೆ. ಹೀಗಾಗಿ ಯೋಜನೆ ಕೈಗೆತ್ತಿಕೊಳ್ಳಬಾರದು ಎಂದು ಒತ್ತಾಯಿಸಿ ಅಲ್ಲಿನ 6 ಸಾವಿರಕ್ಕೂ ಅಧಿಕ ರೈತರು ಧರ್ಮಪುರಿ ಜಿಲ್ಲೆಯಿಂದ ಕರ್ನಾಟಕ ಗಡಿಯತ್ತ ಪಾದಯಾತ್ರೆ ಕೈಗೊಂಡಿದ್ದರು.

ಪ್ರತಿಭಟನಾಕಾರರು ಕರ್ನಾಟಕ ಗಡಿ ಪ್ರವೇಶಿಸುವ ಮುನ್ನವೇ ತಮಿಳುನಾಡು ಪೊಲೀಸರು ಅಡ್ಡಗಟ್ಟಿದರು. 1800 ಮಂದಿಯನ್ನು ವಶಕ್ಕೆ ತೆಗೆದುಕೊಂಡು, ಉಳಿದ ವರನ್ನು ಚದುರಿಸಿದರು. ಪಾದಯಾತ್ರೆಯು ಕರ್ನಾಟಕ ಗಡಿ ಪ್ರವೇಶಕ್ಕೆ ಮುನ್ನವೇ ಅಂತ್ಯಗೊಂಡಿತು. ಗಡಿಯಲ್ಲಿ ಬಂದೋಬಸ್ತ್: ತಮಿಳುನಾಡಿನ ರೈತರ ಬೃಹತ್ ಪಾದಯಾತ್ರೆ ಹಿನ್ನೆಲೆಯಲ್ಲಿ ಉಭಯ ರಾಜ್ಯಗಳ ಗಡಿಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಡಿವೈಎಸ್‍ಪಿ ಧನಂಜಯ ನೇತೃತ್ವದಲ್ಲಿ ರಾಮನಗರ ಜಿಲ್ಲಾ ಪೊಲೀಸರು ಗಡಿ ಗ್ರಾಮಗಳಾದ ಹುಣಸನಹಳ್ಳಿ, ಕಾಡುಶಿವನಹಳ್ಳಿ, ಕೊಳಗೊಂಡನಹಳ್ಳಿ ಬಳಿ ಶುಕ್ರವಾರದಿಂದಲೇ ಕಾವಲಿಗಿದ್ದರು. ಅತ್ತ ತಮಿಳುನಾಡು ಗಡಿಯಂಚಿನಲ್ಲಿ ಕೃಷ್ಣಗಿರಿ ಜಿಲ್ಲೆಯ ಪೊಲೀಸ್ ಉಪ ಅಧೀಕ್ಷಕಿ ತಮಿಳು ಅರಸಿ ನೇತೃತ್ವದಲ್ಲಿ ಆ ರಾಜ್ಯದ ಶಸ್ತ್ರಾಸ್ತ್ರ ಮೀಸಲು ಪಡೆಯ 1 ತುಕಡಿ, 4 ಸಬ್ ಇನ್ಸ್‍ಪೆಕ್ಟರ್‍ಗಳು, ಒಬ್ಬರು ಸರ್ಕಲ್ ಇನ್ಸ್‍ಪೆಕ್ಟರ್ ಸೇರಿದಂತೆ ಹಲವು ಅಧಿಕಾರಿಗಳ ತಂಡದಿಂದ ಸರ್ಪಗಾವಲಿತ್ತು.
ಶಾಂತಿ ಭಂಗವಿಲ್ಲ: ತಮಿಳುನಾಡು ರೈತರ ಪ್ರತಿಭಟನಾ ಪಾದಯಾತ್ರೆ ಹಿನ್ನೆಲೆಯಲ್ಲಿ ಮೇಕೆದಾಟು- ಸಂಗಮ ದಲ್ಲಿ ಯಾವುದೇ ಅಹಿತರಕ ಘಟನೆ ಸಂಭವಿಸದೆ, ಪರಿಸ್ಥಿತಿ ಶಾಂತಯುತವಾಗಿತ್ತು. ಪ್ರವಾಸಿಗರ ಸಂಖ್ಯೆಯಲ್ಲೂ ಯಾವುದೇ ರೀತಿ ಏರುಪೇರು ಆಗಿರಲಿಲ್ಲ. ಉಭಯ ರಾಜ್ಯಗಳ ಗಡಿ ಭಾಗದಲ್ಲಿ ಪೊಲೀಸರು ವಾಹನಗಳನ್ನು ತಪಾಸಣೆಗೆ ಒಳಪಡಿಸಿದ ಬಳಿಕವಷ್ಟೇ ಮುಂದೆ ದಾಟಲು ಬಿಡುತ್ತಿದ್ದರು. ಕರ್ನಾಟಕ ಗಡಿಯೊಳಗೆ ತಮಿಳುನಾಡು ರೈತರ ಪಾದಯಾತ್ರೆ ನುಸುಳದಂತೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದು, ಯಾವುದೇ ರೀತಿ ಅಹಿತಕರ ಘಟನೆಗೆ ಆಸ್ಪದವಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರಗುಪ್ತ ಅವರು ತಿಳಿಸಿದ್ದಾರೆ.

ಕನ್ನಡಪರ ಸಂಘಟನೆಗಳ ಆಕ್ರೋಶ ತಮಿಳುನಾಡು ರೈತರ ಪ್ರತಿಭಟನೆಗೆ ರಾಜ್ಯ ದಲ್ಲೂ ರೈತ ಮತ್ತು ಕನ್ನಡಪರ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರಾಮನಗರದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ, ಕನಕಪುರದಲ್ಲಿ ರೈತ ಸಂಘದಿಂದ ಪ್ರತಿಭಟನೆ ನಡೆದಿದೆ. ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಸಂಗ ಮದ ಬಳಿ ಅಣೆಕಟ್ಟೆ ನಿರ್ಮಾಣಕ್ಕೆ ತಮಿಳುನಾಡು ರೈತರಿಂದ ಪ್ರತಿಭಟನೆ ವ್ಯಕ್ತವಾಗುತ್ತಿದ್ದಂತೆ ಕನಕಪುರ ತಹಸೀಲ್ದಾರ್ ಗೆ ಮನವಿ ಸಲ್ಲಿಸಿದ ರಾಜ್ಯ ರೈತ ಸಂಘದ ಪದಾಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಯಾವುದೇ ಕಾರಣಕ್ಕೂ ತಮಿಳುನಾಡಿನ ರೈತರ ಪ್ರತಿಭಟ ನೆಗೆ ಮಣಿಯಬಾರದು, ಆದಷ್ಟು ಶೀಘ್ರ ಅಣೆಕಟ್ಟು ನಿರ್ಮಿಸುವಂತೆ ಒತ್ತಾಯಿಸಿದ್ದಾರೆ. ಅಣೆಕಟ್ಟು ನಿರ್ಮಿಸುವಂತೆ ರಾಜ್ಯದ ರೈತರು ಪ್ರತಿಭಟನೆಯನ್ನು ಮಾಡಲಿದ್ದೇವೆ, ತಮಿಳು ನಾಡು ಪಾಲಿನ ನೀರು ನಮಗೆ ಬೇಡ, ಆದರೆ, ಹೆಚ್ಚುವರಿಯಾಗಿ ಸಮುದ್ರ ಸೇರುವ ನೀರನ್ನು ಬಳಸಿಕೊಳ್ಳುವುದು ನಮ್ಮ ಹಕ್ಕಾಗಿದೆ ಎಂದರು. ನಿಯೋಗದಲ್ಲಿ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಸಂಪತ್‍ಕುಮಾರ್, ತಾಲೂಕು ಅಧ್ಯಕ್ಷ ಅನಂತರಾಮï, ಮುಖಂಡರಾದ ಪುರದಯ್ಯ, ನಾರಾಯಣಸ್ವಾಮಿ, ಶ್ರೀನಿವಾಸ್, ಗಜೇಂದ್ರಸಿಂಗ್, ರೈತ ಮಹಿಳೆಯರಾದ ಮಂಗಮ್ಮ, ಅನಿತಾ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement