ಬೆಂಗಳೂರು: ಅವಶ್ಯವಿದ್ದಲ್ಲಿ ವಿಶ್ವ ಬ್ಯಾಂಕ್ ಅಥವಾ ಇನ್ನಾವುದೇ ಮೂಲದಿಂದ ಸಾಲ ಪಡೆದರೂ ಪರವಾಗಿಲ್ಲ, ಬಯಲುಸೀಮೆ ಜಿಲ್ಲೆಗಳಿಗೆ ತ್ವರಿತವಾಗಿ ಶಾಶ್ವತವಾದ ನೀರಾವರಿ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಸಲಹೆ ನೀಡಿದ್ದಾರೆ.
ಚಿತ್ರಕಲಾ ಪರಿಷತ್ತಿನಲ್ಲಿ ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಆಶ್ರಯದಲ್ಲಿ ಛಾಯಾಗ್ರಾಹಕ ಬಿ. ಎನ್.ಮೋಹನ್‍ಕುಮಾರ್ ಆಯೋಜಿಸಿದ್ದ `ಬರ-ಛಾಯಾಚಿತ್ರ' ಪ್ರದರ್ಶನ ಉದ್ಘಾಟಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕೋಲಾರ, ಚಿಕ್ಕಬಳ್ಳಾಪುರ ಮಾತ್ರವಲ್ಲ, ಮಧ್ಯ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಇಂದು ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ.
ಕೆಲವೆಡೆ ಫ್ಲೋರೈಡ್‍ಯುಕ್ತ ನೀರು ಸಿಗುತ್ತಿದೆ. ಇಂಥ ದುಸ್ಥಿತಿಗೆ ಹಿಂದಿನಿಂದ ಬಂದ ಎಲ್ಲ ಸರ್ಕಾರಗಳು ಕಾರಣವಾಗಿವೆ ಎಂದರು. ಬರಪೀಡಿತ ಜಿಲ್ಲೆಗಳಿಗೆ ಶಾಶ್ವತವಾದ ನೀರಾವರಿ ಕಲ್ಪಿಸಲು ಸರ್ಕಾರವು ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಿದೆ. ತುಂಗಾ ಮೇಲ್ಡಂಡೆ ಯೋಜನೆಯೂ ಶುರುವಾಗಿದೆ. ಮೇಕೆದಾಟು ಯೋಜನೆಯೂ ಚಾಲ್ತಿಯಲ್ಲಿದೆ. ಇವೆಲ್ಲವೂ ತ್ವರಿತವಾಗಿ ಕಾರ್ಯಗತವಾಗಬೇಕಾದರೆ, ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಹಾಗೆಯೇ, ಎಲ್ಲ ಪಕ್ಷಗಳು ರಾಜಕೀಯ ಮರೆತು ಸಹಕಾರ ನೀಡಬೇಕಿದೆ ಎಂದು ಹೇಳಿದ ಅವರು, ನೀರಾವರಿ ಯೋಜನೆಗಳ ಸಮಗ್ರ ಚರ್ಚೆಗೆ ಬಜೆಟ್ ಅಧಿವೇಶನದಲ್ಲಿ ಅವಕಾಶ ಮÁಡಿಕೊಡಲಾಗುವುದು ಎಂದರು.
ಎತ್ತಿನಹೊಳೆ ಯೋಜನೆಯಿಂದ ನೇತ್ರಾವತಿ ನದಿ ಮೂಲಗಳಿಗೆ ಧಕ್ಕೆಯಾಗುತ್ತದೆ ಎಂಬ ಆತಂಕ ದಕ್ಷಿಣ ಕನ್ನಡದ ಜನರಲ್ಲಿದೆ. ಎತ್ತಿನಹೊಳೆ ಅಥವಾ ಯಾವುದೇ ಮೂಲದಿಂದ ನೀರು ಸಿಗದಿದ್ದರೆ, ಬಯಲು ಸೀಮೆ ಜನರು ಸಂಕಷ್ಟಕ್ಕೆ ಒಳಗಾಗಲಿದ್ದಾರೆ. ಯೋಜನೆಯಿಂದ ನದಿಗೆ ಧಕ್ಕೆಯಾಗಲಿದೆ ಎಂಬ ಭಯವನ್ನು ಮೊದಲು ಹೋಗಿಸಬೇಕಿದೆ ಎಂದರು.