ಬೆಂಗಳೂರು: ಬಿಇಎಲ್ ಸರ್ಕಲ್ ಬಳಿಯ ಮೇಲ್ಸೇತುವೆ ಕಾಮಗಾರಿ ವಿಳಂಬವಾಗುತ್ತಿರುವುದನ್ನು ಖಂಡಿಸಿ ಬೆಂಗಳೂರು ಉಳಿಸಿ ಸಮಿತಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಕಾಮಗಾರಿ ವಿಳಂಬಕ್ಕೆ ಬಿಡಿಎ ಅಧಿಕಾರಿಗಳೇ ಕಾರಣ ಎಂದು ಆರೋಪಿಸಿದ ಕಾರ್ಯಕರ್ತರು ಬಿಡಿಎ ಮುಂಭಾಗದ ರಸ್ತೆಯಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿದರು. ನಂತರ ಬಿಡಿಎ ಕೇಂದ್ರ ಕಚೇರಿ ಎದುರು ಜಮಾಯಿಸಿದರು. ಹಿರಿಯ ರಂಗಕರ್ಮಿ ಎಚ್.ಜಿ.ಸೋಮಶೇಖರ್, ಕಾರ್ಮಿಕ ಮುಖಂಡ ಎಂ.ಎನ್.ಶ್ರೀರಾಮ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಬಿಡಿಎ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ನಂತರ ಬಿಡಿಎ ಕಾರ್ಯದರ್ಶಿ ಕಾಂತರಾಜ್ ಅವರಿಗೆ ಮನವಿ ಸಲ್ಲಿಸಿದರು.
`ಬೆಂಗಳೂರು ಉಳಿಸಿ' ಸಮಿತಿಯ ಸಹ ಸಂಚಾಲಕ ವಿ.ಜ್ಞಾನಮೂರ್ತಿ ಮಾತನಾಡಿ, ಎಂಇಎಸ್ ರಿಂಗ್ ರಸ್ತೆ ಎಂದೇ ಹೆಸರಾದ ಈ ರಸ್ತೆಗೆ ಅಡ್ಡಲಾಗಿ ಎರಡು ರೈಲ್ವೆ ಹಳಿಗಳಿವೆ. ಇಲ್ಲಿ ನಿತ್ಯ 60ಕ್ಕೂ ಹೆಚ್ಚು ರೈಲುಗಳು ಸಂಚರಿಸುವುದರಿಂದ ಪದೇಪದೇ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ಹಾಕಲಾಗುತ್ತದೆ. ಇದರಿಂದ ರಿಂಗ್ ರಸ್ತೆ ಸಂಚಾರ ಗಂಟೆಗಟ್ಟಲೇ ಸ್ಥಗಿತವಾಗುತ್ತದೆ. ಇದನ್ನು ತಪ್ಪಿಸಲು ರೈಲ್ವೆ ಮತ್ತು ಬಿಡಿಎ ಸಹಯೋಗದಲ್ಲಿ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ. ಇದರ ಕಾಮಗಾರಿ 2012ರಲ್ಲೇ ಆರಂಭವಾಗಿದ್ದು, 2014ಕ್ಕೆ ಮುಗಿಯಬೇಕಿತ್ತು. ಆದರೆ, ಕಾಮಗಾರಿ ವಿಳಂಬವಾಗಿ ವಾಹನ ಸವಾರರು ನಿತ್ಯ ನರಕ ಅನುಭವಿಸುವಂತಾಗಿದೆ ಎಂದು ಹೇಳಿದರು.
ರಂಗಕರ್ಮಿ ಎಚ್.ಜಿ.ಸೋಮಶೇಖರ್ ಮಾತನಾಡಿ, ತುಮಕೂರು ಮತ್ತು ಬಿಇಎಲ್ ರಸ್ತೆ ನಡುವಿನ ರಿಂಗ್ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಇದಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಮೇಲ್ಸೇತುವೆ ಕಾಮಗಾರಿ ಆರಂಭಿಸಲಾಗಿದೆ. ಆದರೆ, ಕಾಮಗಾರಿಯನ್ನು ಬಿಡಿಎ ವಿಳಂಬ ಮಾಡುತ್ತಿದ್ದು, ಇದರಿಂದ ಜನರಿಗೆ ಅನಾನುಕೂಲ ಉಂಟಾಗಿದೆ ಎಂದು ದೂರಿದರು.