ಕುಣಿಗಲ್/ಕೊಪ್ಪಳ: ದಕ್ಷ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ನಂತರ ರಾಜ್ಯ ಸರ್ಕಾರಿ ನೌಕರರೇ ಸರ್ಕಾರದ ವಿರುದ್ಧ ಸಿಡಿದೇಳುತ್ತಿದ್ದಾರೆ. ಜನರ ವಿಶ್ವಾಸ ಕಳೆದುಕೊಂಡಿರುವ ಸಿಐಡಿ ಬದಲು ಸಿಬಿಐ ತನಿಖೆಗೆ ಆಗ್ರಹಿಸಿ ಬುಧವಾರ ಇಬ್ಬರು ರಾಜಿನಾಮೆ ನೀಡಿದ್ದಾರೆ. ಅಬಕಾರಿ ಇಲಾಖೆ ಯಲ್ಲಿದ್ದಾಗ ರವಿ ಒಡನಾಡಿಯಾಗಿದ್ದ ಕುಣಿಗಲ್ ಅಬಕಾರಿ
ನಿರೀಕ್ಷಕ ನಿಂಗೇಗೌಡ ಮತ್ತು ಕೊಪ್ಪಳದಲ್ಲಿ ರವಿ ಅವರ ಕಾರ್ಯವೈಖರಿ ನೋಡಿದ್ದ ಆರೋಗ್ಯ ಇಲಾಖೆ ಕಿರಿಯ ಸಹಾಯಕ ಬಸವಲಿಂಗ ಪ್ರಸಾದ ಸರ್ಕಾರಿ ಸೇವೆಯಿಂದ ಬಿಡುಗಡೆ ಬಯಸಿದ್ದಾರೆ.
ಪಾದಯಾತ್ರೆ: ಕುಣಿಗಲ್ ಅಬಕಾರಿ ನಿರೀಕ್ಷಕ ನಿಂಗೇಗೌಡರು ಬುಧವಾರ ಸಂಜೆ ರವಿ ಅವರ ಸಮಾಧಿಗೆ ಕೈ ಮುಗಿದು ಪಾದಯಾತ್ರೆ ಆರಂಭಿಸಿದ್ದು, ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಿದ್ದಾರೆ. ಐಎಎಸ್ ಅಧಿಕಾರಿಗೆ ಸೂಕ್ತ ರಕ್ಷಣೆ ನೀಡಲು ವಿಫಲವಾಗಿರುವ ರಾಜ್ಯ ಸರ್ಕಾರ ಸಾಮಾನ್ಯ ಅಧಿಕಾರಿಗಳಿಗೆ ಹೇಗೆ ರಕ್ಷಣೆ ನೀಡುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ರವಿ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ. ಜನಾನುರಾಗಿಅಧಿಕಾರಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಸತ್ಯ ಹೊರ ಬರಲ್ಲ: ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದ ಆರೋಗ್ಯ ಸಹಾಯಕರಾಗಿ ಕೆಲಸ ಮಾಡುತ್ತಿರುವ ಬಸವಲಿಂಗ ಪ್ರಸಾದ ತಮ್ಮ ವಿವರವಾದ ರಾಜಿನಾಮೆ ಪತ್ರವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರಿಗೆ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಇತ್ತೀಚೆಗೆ ಪ್ರಾಮಾಣಿಕಅ„ಕಾರಿಗಳಿಗೆ ಕಿರುಕುಳ, ಹಿಂಬಡ್ತಿ, ಅನುಮಾನಾಸ್ಪದ ಸಾವು ಮೊದಲಾದ ಪ್ರಕರಣಗಳನ್ನು ಗಮನಿಸುತ್ತಿದ್ದೇನೆ. ಯಾವ ಪ್ರಕರಣ ದಲ್ಲಿಯೂ ಯಾರಿಗೂ ಶಿಕ್ಷೆ ಯಾಗಿಲ್ಲ. ಪೋಲೀಸ್ ಅಧಿಕಾರಿ
ಮಲ್ಲಿಕಾರ್ಜುನ ಬಂಡಿ ಅವರ ಶೂಟೌಟ್ ಪ್ರಕರಣದ ಸಿಐಡಿ ತನಿಖೆ ಇನ್ನು ಹೊರಬಂದಿಲ್ಲ. ಹೀಗಾಗಿ ಸರ್ಕಾರಿ ಅಧಿಕಾರಿಗಳಿಗೆ ನಿಷ್ಠೆ,ಪ್ರಾಮಾಣಿಕತೆಯಿಂದ
ಕೆಲಸ ನಿರ್ವ ಹಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಡಿ.ಕೆ. ರವಿ ಅವರು ಕೊಪ್ಪಳದಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ನನ್ನ ಹೆಂಡತಿಯೂ ಕೊಪ್ಪಳ ಜಿಪಂ ವ್ಯಾಪ್ತಿಯಲ್ಲಿ ಬರುವ ನಿರ್ಮಲ ಭಾರತ ಅಭಿಯಾನ ಯೋಜನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದ್ದರಿಂದ ಹತ್ತಿರದಿಂದ ರವಿ ಅವರ ಕಾರ್ಯನಿರ್ವಹಣೆ ಬಲ್ಲೆ.
ಅವರ ಅನುಮಾನಾಸ್ಪದ ಸಾವು ಕೇಳಿ ಎರಡು ದಿನದಿಂದ ಊಟ, ನಿದ್ದೆ ಮಾಡಿಲ್ಲ ಎಂದಿದ್ದಾರೆ.