ಮೈಸೂರು: "ಹಾಯ್ ಕೃಷ್ಣ' ಚಿತ್ರದ ನಾಯಕ ನವೀನ್ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.
ಬೆಳವಾಡಿಯ ನಿವಾಸಿಗಳಾದ ಮಣಿ ಮತ್ತು ಮನು ಬಂಧಿತ ಆರೋಪಿಗಳು. ಈ ಇಬ್ಬರು ಬೆಳವಾಡಿಯ ತೋಟದ ಮನೆಯೊಂದರಲ್ಲಿ ತಲೆಮರೆಸಿಕೊಂಡಿದ್ದರು. ಪೊಲೀಸರು ಇವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಪ್ರಕರಣ ಸಂಬಂಧಿಸಿದಂತೆ ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಾರಮ್ಮನ ಜಾತ್ರೆಯಲ್ಲಿ ಸಾವಿರಾರು ಜನರ ನಡುವೆ ಚಲನಚಿತ್ರ ನಟ ನವೀನ್‌ಕೃಷ್ಣ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಮೈಸೂರಿನಲ್ಲಿರುವ ಬೆಳವಾಡಿಯಲ್ಲಿ ಈ ಘಟನೆ ನಡೆದಿತ್ತು.
ಹಳೇ ದ್ವೇಷದ ಹಿನ್ನಲೆಯಲ್ಲಿ ನವೀನ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿತ್ತು. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
"ಹಾಯ್ ಕೃಷ್ಣ' ಚಿತ್ರದ ನಾಯಕ ನವೀನ್ ಅವರು ಚಿತ್ರ ನಿರ್ಮಾಣದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು. ಅಲ್ಲದೇ ನವೀನ್ ಗೆ ಹಣಕಾಸಿನ ವಿಚಾರದಲ್ಲಿ ಸ್ನೇಹಿತನೊಂದಿಗೆ ವೈಷಮ್ಯವಿತ್ತು. ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಕೊಲೆ ಮಾಡಲು ಯತ್ನಿಸಿದ್ದ ನವೀನ್, ಕೊಲೆ ಯತ್ನದ ಆರೋಪಿಯಾಗಿದ್ದರು.