ಕುಣಿಗಲ್: ಡಿ.ಕೆ.ರವಿ ಅವರ ಅಂತ್ಯಕ್ರಿಯೆಯ ಮೂರನೇ ದಿನದ ವಿಧಿವಿಧಾನಗಳನ್ನು ಹುಟ್ಟೂರು ದೊಡ್ಡ ಕೊಪ್ಪಲಿನಲ್ಲಿ ಕುಟುಂಬಸ್ಥರು ಗುರುವಾರ ನೆರವೇರಿಸಿದರು.ಸೋದರ ರಮೇಶ, ತಾಯಿ ಗೌರಮ್ಮ ಹಾಲುತುಪ್ಪ ಹಾಕುವ ಕಾರ್ಯನೆರವೇರಿಸಿದರು.
ಗ್ರಾಮಸ್ಥರು, ಹತ್ತಿರದ ಸಂಬಂಧಿಗಳು, ನೆಂಟರು ಮೊದಲಿಗೆ ಪೂಜೆಸಲ್ಲಿಸಿದರು. ನಂತರ ಕೋಲಾರ, ರಾಮನಗರ, ಸೇರಿದಂತೆ ಹಲವು ಜಿಲ್ಲೆಗಳಿಂದ ಆಗಮಿಸಿದ್ಧ ಅಭಿಮಾನಿಗಳೂ
ಸಮಾಧಿಗೆ ಗೌರವ ಸಲ್ಲಿಸಿದರು. ಅವರಲ್ಲಿ ಐಎಎಸ್ ಸೇರಿದಂತೆ ಹಲವು ಜಿಲ್ಲೆಗಳಿಂದ ಆಗಮಿಸಿದ್ದ ಅಭಿಮಾನಿಗಳೂ ಇದ್ದರು. ಮಧ್ಯಾಹ್ನ 12.30ರ ವೇಳೆಗೆ ಬೆಂಗಳೂರಿನಿಂದ ಆಗಮಿಸಿದ ಪತ್ನಿ ಕುಸುಮಾ ಹಾಗೂ ಅವರ ಕುಟುಂಬ ವರ್ಗದವರೂ ಪೂಜೆ ಸಲ್ಲಿಸಿದರು.
ರಾಜ್ಯಪಾಲರ ಭೇಟಿ: ರವಿ ಸೋದರ ರಮೇಶ್ ಮಾತನಾಡಿ, ಕುಟುಂಬದ ಸದಸ್ಯರೆಲ್ಲರೂ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ರಾಜ್ಯಪಾಲರನ್ನು ಭೇಟಿ ಮಾಡಲು ಶುಕ್ರವಾರ ತೆರಳುತ್ತೇವೆ ಎಂದು ತಿಳಿಸಿದರು. ರವಿಯವರ ಚಿರಶಾಂತಿ ಸ್ಥಳದಲ್ಲಿ ಉದ್ಯಾನ ನಿರ್ಮಿಸುವ ಜತೆಗೆ ಅವರ ಸಾಧನೆ ಹಾಗೂ ಅವರು ಕೈಗೊಂಡ ಜನಪರ ಕಾರ್ಯಗಳನ್ನು ವಿವರಿಸುವ, ಒಬ್ಬ ಮಾದರಿ ಅಧಿಕಾರಿ ಹೇಗಿರಬೇಕೆಂಬ ರೀತಿಯಲ್ಲಿ ಇತರರಿಗೆ ಮಾರ್ಗದರ್ಶನವಾಗುವ ರೀತಿಯಲ್ಲಿ ದೇವಾಲಯ ನಿರ್ಮಿಸಲಾಗುವುದು ಎಂದು ರವಿ ಸಹಪಾಠಿ ಮಂಚಯ್ಯ ತಿಳಿಸಿದ್ದಾರೆ.