ಕಾರ್ಕಳ: ನವ್ಯ ಚಳವಳಿಯ ಸಾಹಿತಿಗಳು ತಮ್ಮ ಮತ್ತು ತಮ್ಮ ಬಳಗದ ಪ್ರಶಂಸೆ, ತಮಗಾಗದವರ ಹತ್ತಿಕ್ಕುವ ಕೆಲಸ ಮಾಡಿದರೂ ಅಂತರ್ಜಾಲ ಮಾಧ್ಯಮಗಳಿಂದಾಗಿ ನನಗೀಗ ಅದರಿಂದ ಬಿಡುಗಡೆ ಸಿಕ್ಕಿದೆ ಎಂದು ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಹೇಳಿದರು.
ಇಲ್ಲಿನ ಸಾಹಿತ್ಯ ಸಂಘದ ಆಶ್ರಯದಲ್ಲಿ ಭಾನುವಾರ ನಡೆದ `ಸತ್ಸಂಗ, ಸಲ್ಲಾಪ, ಸಂಮಾನ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ನವೋದಯ ಕಾಲದಲ್ಲಿ ಒಳ್ಳೆಯ ವಿಚಾರಗಳೇ ಬರಲಿ ಎಂಬ ಸಹೃದಯ ಭಾವ ಇತ್ತು. ಆದರೆ ನವ್ಯ ಸಾಹಿತ್ಯ ಯುಗದಲ್ಲಿ ತಮಗಾಗದವರನ್ನು ಹತ್ತಿಕ್ಕುವ ಪ್ರವೃತ್ತಿ ಬೆಳೆಯಿತು. ಇದಕ್ಕೆ ಆಗಿನ ಪ್ರಮುಖ ಪತ್ರಿಕೆ ಎತ್ತಿಕಟ್ಟುವ ಕೆಲಸವನ್ನು ಸಮರ್ಥವಾಗಿ ಮಾಡಿತು.
ಆದರೆ ನನಗೆ ನನ್ನ ಬರವಣಿಗೆ ಮೇಲೆ ಭರವಸೆ ಇತ್ತು, ಅದಕ್ಕಿಂತಲೂ ಹೆಚ್ಚು ಓದುಗರ ಮೇಲೆ ನಂಬಿಕೆ ಇತ್ತು. ಈ ಹೊತ್ತಲ್ಲಿ ಪತ್ರಿಕಾರಂಗದಲ್ಲಿ ಕ್ರಾಂತಿಯಾಯಿತು. ಹೋರಾಟದ ಮನೋಭಾವದ ಕೆಚ್ಚುಳ್ಳ ಸಂಪಾದಕ ವಿಶ್ವೇಶ್ವರಭಟ್ ಅವರು ತಮ್ಮ ಪತ್ರಿಕೆಯಲ್ಲಿ ಎಲ್ಲರಿಗೂ ಧ್ವನಿಯಾದರು. ನವ್ಯ ಚಳವಳಿಗೆ ವಿರುದಟಛಿವಾದ ಲೇಖನಗಳನ್ನೂ ಪ್ರಕಟಿಸಿದರು' ಎಂದು ಶ್ಲಾಘಿಸಿದರು.
ಅಂತರ್ಜಾಲ ಕ್ರಾಂತಿ: ಇದೀಗ ಅಂತರ್ಜಾಲ ಮಾಧ್ಯಮದಲ್ಲಿ ಹೊಸ ಕ್ರಾಂತಿಯಾಗಿದ್ದು, ಇಲ್ಲೂ ಸಾಹಿತ್ಯ ವಿಮರ್ಶೆಗಳು ಬರುತ್ತಿವೆ. ಇವುಗಳು ಪತ್ರಿಕೆಗಳ ವರದಿಯನ್ನು ವಿಮರ್ಶಿಸುವ ಪ್ರಬಲ ಮಾಧ್ಯಮವಾಗಿ ಮೂಡಿಬಂದಿವೆ. ಹಿಂದೆ ಲೇಖನಗಳನ್ನು ಪ್ರಕಟಿಸದೆ ಹತ್ತಿಕ್ಕುವ ಕೆಲಸ ಆಗುತ್ತಿತ್ತು. ಈಗ ಪ್ರಕಟಿಸದಿದ್ದರೆ ಲೇಖಕರು ಅಂತರ್ಜಾಲ ಮಾಧ್ಯಮದಲ್ಲಿ ಲೇಖನಗಳನ್ನು ಹಾಕುತ್ತಿದ್ದಾರೆ. ಹೀಗಾಗಿ ನನಗೀಗ ಪೂರ್ತಿ ಬಿಡುಗಡೆ ಸಿಕ್ಕಿದೆ ಎಂದು ಭೈರಪ್ಪ ಹೇಳಿದರು.
ಸಾಹಿತ್ಯವನ್ನು ಸಾಹಿತ್ಯದ ದೃಷ್ಟಿಯಿಂದಲೇ ನೋಡಬೇಕು. ಸೈದಾಂತಿಕ ದೃಷ್ಟಿಕೋನದಿಂದ ನೋಡಿದರೆ ವಿರೋಧ ಸಹಜ. ಶ್ರವಣಬೆಳಗೊಳ ಸಾಹಿತ್ಯ ಸಮ್ಮೇಳನದಲ್ಲಿ ನನ್ನ ಕೃತಿಗಳ ಕುರಿತು ಟೀಕೆ ಬಂದಿರಬಹುದು. ವಿರೋಧಿಯನ್ನು ಸೋಲಿಸಲು ಎಲ್ಲರೂ ಒಟ್ಟು ಸೇರಿ ಎಲ್ಲ ಕಡೆಯಿಂದಲೂ ಶಸ್ತ್ರಾಸ್ತ್ರ ಯುದ್ದೋಪಾದಿಯಲ್ಲಿ ಪ್ರಯೋಗಿಸಿದರು. ಕಾರಣ ಅವರು ಯುದ್ಧ ಗೆಲ್ಲಲೇಬೇಕೆಂಬ ಸಂಕಲ್ಪದಿಂದ ಮಾಡಿದ ಪ್ರಯತ್ನ ಆಗಿತ್ತು ಅಷ್ಟೇ ಎಂದು ವಿಶ್ಲೇಷಿಸಿದರು.
ಹೊಸತನಕ್ಕೆ ಹೊಂದಿಲ್ಲ: ಈಗ ಅಂತರ್ಜಾಲ ಮಾಧ್ಯಮಗಳು ಪ್ರಬಲವಾಗುತ್ತಿವೆ. ಮೋದಿಯನ್ನು ಸದಾ ಮಾಧ್ಯಮಗಳು ವಿರೋಧಿಸಿದರೂ ಮೋದಿ ಗೆದ್ದು ಪ್ರಧಾನಿಯಾದರು. ಮೋದಿ ಮಾಧ್ಯಮಗಳನ್ನು ಇಂದಿಗೂ ತಮ್ಮ ಹತ್ತಿರಕ್ಕೆ ಬಿಟ್ಟು ಕೊಡುತ್ತಿಲ್ಲ. ತಮಗೆ ಹೇಳಬೇಕಾದ್ದನ್ನು ಟ್ವಿಟ್ಟರ್ ಮೂಲಕವೇ ಹೇಳುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಲ್ಪನೆ ಅಂದರೆ ದುಡಿಯುವ ಸಂಸ್ಕೃತಿ ರೂಡಿsಸಿಕೊಳ್ಳುವುದು. ಆದರೆ ಎಲ್ಲರೂ ಹಳೆಯದನ್ನೇ ಹೇಳುತ್ತಾರೆ ವಿನಃ ಹೊಸತನಕ್ಕೆ ಹೊಂದಿಕೊಳ್ಳುವುದಿಲ್ಲ. ಸಾಹಿತಿಗಳು ಕೂಡ ಇದನ್ನು ಅರ್ಥ ಮಾಡುತ್ತಿಲ್ಲ ಎಂದರು.