ಬೆಂಗಳೂರು: ವಶಪಡಿಸಿಕೊಂಡ ಲಾರಿಗಳ ಬಿಡುಗಡೆಗೆ ಸಂಬಂಧಿಸಿದಂತೆ ಸರ್ಕಾರಿ ಅಧಿಕಾರಿಗೆ ಅವ್ಯಾಚ್ಯವಾಗಿ ನಿಂದಿಸಿದ ಕೋಲಾರ ಶಾಸಕ ವರ್ತೂರು ಪ್ರಕಾಶ್ ವಿರುದ್ಧ ಲೋಕಾಯುಕ್ತ ಸಂಸ್ಥೆಗೆ ದೂರು ಸಲ್ಲಿಸಲಾಗಿದೆ.
ಡಿ.ಕೆ.ರವಿ ಕೋಲಾರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅವರ ಕೆಳಹಂತದ ಅಧಿಕಾರಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಮೂಲಕ ಶಾಸಕ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಣಧೀರ ಪಡೆ ಸೋಮವಾರ ದೂರು ನೀಡಿದೆ.
ಜತೆಗೆ ಅಧಿಕಾರಿ ಮತ್ತು ವರ್ತೂರು ಪ್ರಕಾಶ ನಡುವೆ ನಡೆದ ಸಂಭಾಷಣೆಯ ಆಡಿಯೋವನ್ನು ಸಲ್ಲಿಸಲಾಗಿದೆ. ದೂರನ್ನು ಸ್ವೀಕರಿಸಿರುವ ಲೋಕಾಯುಕ್ತರು ಆಡಿಯೋವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಕರ್ನಾಟಕ ರಣಧೀರ ಪಡೆಯ ಅಧ್ಯಕ್ಷ ಬಿ.ಹರೀಶ್ ಕುಮಾರ್ ತಿಳಿಸಿದ್ದಾರೆ.