ಬೆಂಗಳೂರು: ಯಾವುದೇ ಅಡ್ಡಿ ಬಂದರೂ ಮೇಕೆದಾಟು ಯೋಜನೆ ಕೈ ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಯೋಜನೆ ವಿರೋಧಿಸಿ ಬಂದ್ ಆಚರಿಸಿರುವ ತಮಿಳುನಾಡು ಸರ್ಕಾರಕ್ಕೆ ಈ ಹೇಳಿಕೆ ಮೂಲಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ಮೇಕೆದಾಟು ಯೋಜನೆ ಉಭಯ ರಾಜ್ಯ ಸಮಸ್ಯೆಯಾಗಿ ಪರಿವರ್ತನೆಗೊಂಡಿದೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಆಯೋಜಿಸಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು ಸರ್ಕಾರ ಪದೇ ಪದೇ ಕ್ಯಾತೆ ತೆಗೆಯುತ್ತಲೇ ಇರುತ್ತದೆ. ರಾಜಕೀಯ ಲಾಭಕ್ಕಾಗಿ ತಕರಾರು ಮಾಡುತ್ತಿದ್ದು, ಇದನ್ನು ಸಮರ್ಥವಾಗಿ ರಾಜ್ಯಸರ್ಕಾರ ಎದುರಿಸಲು ಸಿದ್ಧವಿದೆ.
ಕಾವೇರಿ ನ್ಯಾಯಾಧಿಕರಣದ ಐತೀರ್ಪಿನ ಪ್ರಕಾರ ತಮಿಳುನಾಡಿಗೆ ಎಷ್ಟು ನೀರು ಬಿಡಬೇಕು ಅಷ್ಟು ಬಿಡುತ್ತಿದ್ದೇವೆ. ನಮ್ಮ ಜಾಗದಲ್ಲಿ ನಮ್ಮ ಪಾಲಿನ ನೀರಿಗಾಗಿ ಅಣೆಕಟ್ಟು ಕಟ್ಟಿ ಅದರ ಸದ್ಬಳಕೆಗೆ ಯೋಜನೆ ರೂಪಿಸಿದ್ದೇವೆ. ಯೋಜನೆಯಿಂದ ತಮಿಳುನಾಡಿಗೆ ಯಾವುದೇ ತೊಂದರೆಯಾಗುವುದಿಲ್ಲ. ಹೀಗಿದ್ದೂ ತಕರಾರು ಮಾಡಲಾಗುತ್ತಿದೆ. ಕಾನೂನಾತ್ಮಕವಾಗಿಯೇ ತಮಿಳುನಾಡಿಗೆ ತಕ್ಕೆ ಉತ್ತರ ನೀಡಲಾಗುವುದು ಎಂದರು.
ಬಂದ್‍ಗೆ ಪ್ರತಿಭಟನೆ ತಿರುಗೇಟು
ಬೆಂಗಳೂರು: ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಬಂದ್ ನಡೆಸಿದರೆ, ಇತ್ತ ಮಂಡ್ಯ, ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ ತಮಿಳುನಾಡು ವರ್ತನೆ ಖಂಡಿಸಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಸಿಎಂ ಪನ್ನೀರ್ ಸೆಲ್ವಂ, ಮಾಜಿ ಸಿಎಂ ಜಯಲಲಿತಾ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದವು. ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್, ಕಾರ್ಯಕರ್ತರೊಂದಿಗೆ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ತಮಿಳುನಾಡು ಮುಖ್ಯಮಂತ್ರಿ ಪನ್ನೀರ ಸೆಲ್ವಂ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು. ರಾಜ್ಯದ ಕುಡಿಯುವ ನೀರಿನ ಯೋಜನೆಗೆ ತಮಿಳುನಾಡು ಅನಗತ್ಯವಾಗಿ ಕ್ಯಾತೆ ತೆಗೆಯುತ್ತಿದೆ.
ಕಾವೇರಿ ವಿಚಾರದಲ್ಲಿ ಪ್ರತಿ ಬಾರಿಯೂ ಕಾಲು ಕೆರೆದುಕೊಂಡು ರಾಜ್ಯದ ವಿರುದ್ಧ ಜಗಳ ಕಾಯುವ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಹಾಗೂ ಅಲ್ಲಿನ ಸರ್ಕಾರಕ್ಕೆ ಧಿಕ್ಕಾರ ಕೂಗಿದರು. ಇದಕ್ಕೆ ಮುಖಂಡರಾದ ಸಾ.ರಾ.ಗೋವಿಂದು ಸೇರಿದಂತೆ ಇತರರು ಧ್ವನಿಗೂಡಿಸಿದರು. ಕನ್ನಡಪರ ಸಂಘಟನೆಗಳು, ಕನ್ನಡಜನಪರ ವೇದಿಕೆ ಕಾರ್ಯಕರ್ತರು, ಜಯ ಕರ್ನಾಟಕ ಸಂಘಟನೆಗಳ ಸದಸ್ಯರೂ ಅಲ್ಲಲ್ಲಿ ಪ್ರತಿಭಟನೆ ನಡೆಸಿದರು. ಮೈಸೂರು, ಮಂಡ್ಯದಲ್ಲೂ ಆಕ್ರೋಶ: ಮೈಸೂರಿನ ಅಗ್ರಹಾರ ವೃತ್ತದಲ್ಲಿ ಕನ್ನಡ ವೇದಿಕೆಯವರು ಪ್ರತಿಭಟನೆ ನಡೆಸಿ ಪ್ರಧಾನಿ ಮಧ್ಯ ಪ್ರವೇಶಕ್ಕೆ ಆಗ್ರಹಿಸಿದರು. ಮೇಕೆದಾಟು ಯೋಜನೆ ಅನುಷ್ಠಾನ ಹೋರಾಟ ಸಮಿತಿ ಕಾರ್ಯಕರ್ತರು , ಕರವೇ ಕಾರ್ಯಕರ್ತರೂ ಮಂಡ್ಯದಲ್ಲಿ ಧರಣಿ ನಡೆಸಿದರು.
ಮೇಕೆದಾಟು ಯೋಜನೆ ಅನುಷ್ಠಾನದಲ್ಲಿ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಹಿಂಜರಿಯಬಾರದು. ಯೋಜನೆ ಅನುಷ್ಠಾನಗೊಳಿಸುವ ಮೂಲಕವೇ ತಮಿಳುನಾಡಿಗೆ
ತಕ್ಕ ಉತ್ತರ ನೀಡಬೇಕು. ನಮ್ಮದೇ ನೀರನ್ನು ನಾವು ಪಡೆದುಕೊಳ್ಳುವುದಕ್ಕೆ ಯಾರ ಅನುಮತಿಯೂ ಬೇಕಾಗಿಲ್ಲ. ತಮಿಳುನಾಡಿನ ಕ್ಯಾತೆಗಳಿಗೆ ರಾಜ್ಯದ ಕನ್ನಡ ಪರ
ಸಂಘಟನೆಗಳು ತಕ್ಕ ಉತ್ತರ ನೀಡಬೇಕಿದೆ.
-ಮುಖ್ಯಮಂತ್ರಿ ಚಂದ್ರು,
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ