ಬೆಂಗಳೂರು: ಭಾರತಕ್ಕೆ ಬಂದು 18 ವರ್ಷಗಳಾಗಿವೆ. ಪೌರತ್ವಕ್ಕಾಗಿ ಜಿಲ್ಲಾಡಳಿತದಲ್ಲಿ ಅರ್ಜಿ ಸಲ್ಲಿಸಿ 1 ವರ್ಷ ಕಳೆದಿದೆ. ಆದರೆ ಈ ಅರ್ಜಿಗಳು ಇನ್ನೂ ರಾಜ್ಯ ಗೃಹ ಇಲಾಖೆಯಲ್ಲಿದ್ದು, ಕೇಂದ್ರ ಸರ್ಕಾರವನ್ನು ತಲುಪಿಯೇ ಇಲ್ಲ.
ಹೀಗೆಂದು ದುಃಖ ತೋಡಿಕೊಂಡವರು ಪಾಕಿಸ್ತಾನದಿಂದ ವಲಸೆ ಬಂದ ಅಮ್ಮ ಹಾಗೂ ಇಬ್ಬರು ಮಕ್ಕಳು. ಜಿಲ್ಲಾಡಳಿತದ ಕಚೇರಿಯಲ್ಲಿ ಎರಡು ದಿನಗಳ ಕಾಲ ನಡೆದ `ರಾಜ್ಯದಲ್ಲಿ ನೆಲೆಸಿರುವ ಪಾಕಿಸ್ತಾನ ಪ್ರಜೆಗಳಿಗೆ ಪೌರತ್ವ ಮಂಜೂರು ಮಾಡುವ ಅಭಿಯಾನ'ದಲ್ಲಿ ಪಾಕಿಸ್ತಾನದಿಂದ 18 ವರ್ಷಗಳ ಹಿಂದೆ ಆಸ್ಟಿನ್ ಟೌನ್ ಗೆ ಬಂದು ನೆಲೆಸಿರುವ ನಿವಾಸಿಗಳು ತಮ್ಮ ಗೋಳು ತೋಡಿಕೊಂಡರು.
ಆಸ್ಟಿನ್ ಟೌನ್ ನಿವಾಸಿಯಾದ ಇವರಿಗೆ ಒಬ್ಬ ಮಗ ಹಾಗೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ. `ಒಂದು ವರ್ಷದ ಹಿಂದೆ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದು, ಇತ್ತಿಚೆಗೆ ಪ್ರಮಾಣ ಪತ್ರ ಲಭಿಸಿದೆ. ಆದರೆ ಮೂವರು ಮಕ್ಕಳು ನನ್ನೊಂದಿಗೆ ಅರ್ಜಿ ಹಾಕಿದ್ದರೂ ಪೌರತ್ವ ಲಭಿಸಿಲ್ಲ. ಪ್ರತಿ ಬಾರಿ ಅರ್ಜಿ ಪರಿಶೀಲಿಸಲಾಗುವುದು ಎಂದು ಹೇಳುವ ಅಧಿಕಾರಿಗಳು ಏನೂ ಮಾಡಿಲ್ಲ. ಮಕ್ಕಳು ಶಾಲೆಗೆ ಸೇರಿಸಬೇಕೆಂದರೆ ಆಡಳಿತ ಮಂಡಳಿಯಿಂದ ನೂರು ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ವಿದೇಶಿ ಪ್ರಜೆಗಳಾಗಿರುವುದರಿಂದ ಯಾವುದೇ ಸವಲತ್ತುಗಳೂ ಸಿಗುವುದಿಲ್ಲ. ಶಿಕ್ಷಣಕ್ಕಾಗಿ ದುಪ್ಪಟ್ಟು ಹಣ ಪಾವತಿಸಬೇಕಾಗುತ್ತದೆ. ಭಾರತೀಯ ಪೌರತ್ವ ದೊರೆಯದೆ ವರ್ಷಕ್ಕೊಮ್ಮೆ ದೆಹಲಿಗೆ ತೆರಳಿ ವೀಸಾ ನವೀಕರಣ ಮಾಡಬೇಕಾಗುತ್ತದೆ' ಎಂದು ನೋವು ತೋಡಿ ಕೊಂಡರು.
ಲಿಂಗಾರಾಜಪುರ ನಿವಾಸಿಯಾದ ತಬ್ರಿಸ್ ಹಾಗೂ ಸುಮೇರಾ ಅವರದು ಮತ್ತೊಂದು ಕಥೆ. ತಬ್ರಿಸ್ ಅವರನ್ನು ಮದುವೆಯಾದ ಕರಾಚಿಯ ಮಹಿಳೆ ಸುಮೇರಾ ರಾಜ್ಯದಲ್ಲಿ 12 ವರ್ಷಗಳಿಂದ ನೆಲೆಸಿದ್ದಾರೆ. 7 ವರ್ಷಗಳಾದ ನಂತರ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿರುವುದರಿಂದ ಸುಮೇರಾ ಇತ್ತೀಚೆಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಪೌರತ್ವ ಸಿಗುವುದೋ ಇಲ್ಲವೋ ಎಂಬ ಅನುಮಾನ ಇವರನ್ನೂ ಕಾಡುತ್ತಿದೆ.
36 ಅರ್ಜಿಗಳ ಪರಿಶೀಲನೆ
ಎರಡು ದಿನಗಳ ಅಭಿಯಾನದಲ್ಲಿ 36 ಅರ್ಜಿಗಳನ್ನು ಪರಿಶೀಲಿಸಲಾಗಿದೆ. ಕಳೆದೊಂದು ವರ್ಷದಿಂದ ಪರಿಶೀಲನೆಯಲ್ಲಿದ್ದ ಅರ್ಜಿಗಳನ್ನೇ ಮತ್ತೊಮ್ಮೆ ದಾಖಲೆಗಳ ಸಮೇತ ಪರಿಶೀಲಿಸಿದ್ದು, ಹೊಸ ಅರ್ಜಿಗಳು ಬಂದಿಲ್ಲ. ನಗರದಲ್ಲಿ ಒಟ್ಟು 62 ಅರ್ಜಿಗಳು ಪೌರತ್ವಕ್ಕಾಗಿ ಸಲ್ಲಿಕೆಯಾಗಿದ್ದು, ಅಭಿಯಾನದಲ್ಲಿ 36 ಮಂದಿ ಮಾತ್ರ ಹಾಜರಾಗಿ ಮಾತುಕತೆ ನಡೆಸಿದ್ದಾರೆ. ದೇಶದ 24 ಕೇಂದ್ರಗಳಲ್ಲಿ ಅಭಿಯಾನ ನಡೆಸಲಾಗುತ್ತಿದ್ದು, ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ ಪಾಕಿಸ್ತಾನ ಮೂಲದವರಿಗೆ ಶೀಘ್ರದಲ್ಲಿ ಪೌರತ್ವ ಮಂಜೂರು ಮಾಡಲಾಗುತ್ತದೆ. ಅರ್ಜಿಗಳನ್ನು ಪರಿಶೀಲಿಸುತ್ತಿದ್ದು, ರಾಜ್ಯ ಗೃಹ ಇಲಾಖೆಯಿಂದ ಕೇಂದ್ರಕ್ಕೆ ರವಾನೆಯಾಗಿ ನಂತರ ಪೌರತ್ವ ಮಂಜೂರಾಗುತ್ತದೆ' ಎಂದು ಕೇಂದ್ರ ಗೃಹ ಇಲಾಖೆ ನಿರ್ದೇಶಕ ದೇಬ್‍ಪ್ರಸಾದ್ ತ್ರಿಪಾಠಿ ತಿಳಿಸಿದರು.