ಬೆಂಗಳೂರು: ದೇಶದ ತಾಂತ್ರಿಕ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಯಾವಾಗಲೂ ನಂಬರ್ ಒನ್
ಸ್ಥಾನದಲ್ಲಿಯೇ ಇರಬೇಕು. ಇದಕ್ಕಾಗಿ ಕುಲಪತಿ, ಕುಲಸಚಿವರು, ಬೋಧಕ- ಬೋಧಕೇತರ ಸಿಬ್ಬಂದಿ ಒಟ್ಟಾಗಿ ಶ್ರಮಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ವಿಟಿಯು ಪ್ರಾದೇಶಿಕ ಕಚೇರಿ ಉದ್ಘಾಟಿಸಿ, ಕೈಗಾರಿಕೆ- ಉದ್ಯಮಗಳಿಗೆ ಅಗತ್ಯಕ್ಕೆ ತಕ್ಕಂತೆ ಅಭ್ಯರ್ಥಿಗಳು ಸಿದ್ಧರಾಗಬೇಕು. ಅದಕ್ಕೆ ಅಗತ್ಯವಾದ ಪಠ್ಯಕ್ರಮ ರೂಪುಗೊಳ್ಳಬೇಕು. ಹೀಗಾದಾಗ ಕೈಗಾರಿಕೆಗಳಿಗೂ ಅನುಕೂಲವಾಗುತ್ತದೆ, ಆ ಕ್ಷೇತ್ರವೂ ಬೆಳೆಯುತ್ತದೆ ಎಂದರು.
ವಿಟಿಯುನಲ್ಲಿ ಉತ್ತೀರ್ಣರಾದ ಪದವೀಧರರಿಗೆ ಎಂದೆಂದಿಗೂ ಮಾನ್ಯತೆ ಸಿಗಬೇಕು. ಇದಕ್ಕಾಗಿ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು. ಜಾಗತಿಕ ಮಟ್ಟದ ಸ್ಪರ್ಧೆ ಎದುರಿಸುವಂಥ ಶಿಕ್ಷಣ ದೊರೆತಾಗ ವಿಟಿಯುನಿಂದ ಪದವೀಧರರು ಎಲ್ಲಿ ಬೇಕಾದರೂ ಜಯಿಸಲು ಸಾಧ್ಯ ಎಂದು ಹೇಳಿದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಮಹೇಶಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಮುನಿರತ್ನ, ಕುಲಸಚಿವ ಕೆ.ಇ.ಪ್ರಕಾಶ್, ಗೋವಿಂದರಾಜು ಉಪಸ್ಥಿತರಿದ್ದರು.