ಕೆರೆ ಜಾಗದ ಒತ್ತುವರಿ ತೆರವಿಗೆ ಬೇಕಿನ್ನೂ ಸಮಯ | ಕೆಲವು ಮನೆಗಳು, ವಾಣಿಜ್ಯ ಕಟ್ಟಡಗಳ ತೆರವು
ಬೆಂಗಳೂರು: ಬಾಣಸವಾಡಿ ಮುಖ್ಯರಸ್ತೆಯ ಬಳಿ ಬೃಹತ್ ಕಟ್ಟಡಗಳು ಹೆಚ್ಚಿರುವುದರಿಂದ ಕೆರೆ ಜಾಗದ ಒತ್ತುವರಿ ತೆರವು ಕಾರ್ಯಾಚರಣೆ ಇನ್ನೂ ಮೂರು ದಿನಗಳ ಕಾಲ ಮುಂದುವರಿಯಲಿದೆ.
ನಿವಾಸಿಗಳ ಸಣ್ಣ ಮನೆಗಳನ್ನು ತೆರವು ಮಾಡುವುದು ಇನ್ನೂ ತಡವಾಗಲಿದ್ದು, ಸದ್ಯಕ್ಕೆ ಶೆಡ್ ಹಾಗೂ ಸಣ್ಣ ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸಲಾಗಿದೆ. ಸೋಮವಾರ 2 ಬೃಹತ್ ಕಟ್ಟಡಗಳನ್ನು ತೆರವು ಗೊಳಿಸಿದ್ದು, ಮುಖ್ಯರಸ್ತೆಯಲ್ಲಿ ಇನ್ನೂ ಬೃಹತ್ ಕಟ್ಟಡಗಳಿರುವುದರಿಂದ ಕಾರ್ಯಾಚರಣೆ ಮತ್ತಷ್ಟು ತಡವಾಗಲಿದೆ. ಇಲ್ಲಿಯವರೆಗೆ ನೂರಕ್ಕೂ ಹೆಚ್ಚಿನ ವಾಣಿಜ್ಯ ಕಟ್ಟಡಗಳನ್ನು ಜಿಲ್ಲಾಡಳಿತ ತೆರುವು ಮಾಡಿದ್ದು, ಕಟ್ಟಡ ತ್ಯಾಜ್ಯ ಸಾಗಿಸುವ ಕಾರ್ಯವೂ ಸೋಮವಾರದಿಂದ ಆರಂಭಗೊಂಡಿದೆ. ವಾಣಿಜ್ಯ ಕಟ್ಟಡಗಳನ್ನು ಮಾತ್ರ ತೆರವುಗೊಳಿಸುತ್ತಿದ್ದು, ಮೊದಲ ದಿನ ಕೆಲವು ಮನೆಗಳನ್ನು ಕೆಡವಿದ್ದು ಬಿಟ್ಟರೆ ಬೇರೆ ಯಾವುದೇ ಮನೆಗಳನ್ನು ಜಿಲ್ಲಾಡಳಿತ ತೆರವು ಮಾಡಿಲ್ಲ.
ಮನೆಗಳ ತೆರವು ಬಗ್ಗೆ ಜಿಲ್ಲಾಡಳಿತದಿಂದ ಸೂಕ್ತ ನಿರ್ದೇಶನ ಇನ್ನೂ ಬಂದಿಲ್ಲ. ಕಾರ್ಯಾಚರಣೆ ನಡುವೆ ಸ್ಥಳೀಯರು, ಮನೆಗಳ ತೆರುವಿಗೆ ಮುಂದಾದರೆ ಆತ್ಮಹತ್ಯೆ ಮಾಡಿಕೊಳ್ಳಲಾಗುವುದು
ಎಂಬ ಬೆದರಿಕೆಯನ್ನೂ ಒಡ್ಡುತ್ತಿದ್ದಾರೆ. ಬಿದ್ದ ಜೆಸಿಬಿ: ಕಪಿಲನ್ ಆರ್ಕೆಡ್ ಕಟ್ಟಡ ತೆರವು ಕಾರ್ಯಾಚರಣೆ ವೇಳೆ ಜೆಸಿಬಿ ವಾಹನ ಆಯತಪ್ಪಿದ್ದು, ನೆಲಕ್ಕೆ ಉರುಳಿದೆ. ಇದರಿಂದ ಕೆಲಕಾಲ ಗೊಂದಲದ ಸನ್ನಿವೇಶ ಸೃಷ್ಟಿಯಾಗಿದ್ದು, ಅಧಿಕಾರಿಗಳಿಗೆ ಆತಂಕ ಉಂಟಾಗಿತ್ತು. ಜೆಸಿಬಿ ಚಾಲಕ ಸಣ್ಣ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾನೆ. ಅಗ್ನಿಶಾಮಕದಳದ ಸಿಬ್ಬಂದಿ ಸಕಾಲದಲ್ಲಿ ಬಂದು ಚಾಲಕನನ್ನು ರಕ್ಷಿಸಿದ್ದಾರೆ.
5 ಎಕರೆ ವಿವಾದದಲ್ಲಿ
ಬಾಣಸವಾಡಿಯ ಸ.ನಂ.211ರ 47.38ಎಕರೆಯಲ್ಲಿ 42.38 ಎಕರೆ ಮಾತ್ರ ಕೆರೆ ಜಮೀನಾಗಿದ್ದು, ಉಳಿದ 5 ಎಕರೆಗೆ ಸ್ಥಳೀಯರೊಬ್ಬರು ಪಹಣಿ ಮಾಡಿಕೊಡುವಂತೆ ಮನವಿ ಮಾಡಿದ್ದರು. ಈ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ವಿಚಾರಣೆ ನಡೆದಿತ್ತು. ನಾಲ್ಕು ತಿಂಗಳ ಒಳಗಾಗಿ ವಾರಸುದಾರರು ಯಾರು ಎಂಬುದನ್ನು ಖಚಿತಪಡಿಸಿ, ಪಹಣಿ, ಖಾತೆ ಬದಲಾವಣೆ ಮಾಡುವಂತೆ ವಿಶೇಷ ಜಿಲ್ಲಾ„ಕಾರಿಗೆ ಹೈಕೋರ್ಟ್ ಆದೇಶಿಸಿದೆ. ಈ ಪ್ರಕರಣ ಇನ್ನೂ ವಿಚಾರಣೆಯಲ್ಲಿದೆ ಎಂದು ಸ್ಥಳೀಯರಾದ ಜೆ.ಲಕ್ಷ್ಮಮ್ಮ ತಿಳಿಸಿದ್ದಾರೆ.