ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಮಾಡುವ ಪೌರಕಾರ್ಮಿಕರ ಹಾಜರು ಪಡೆಯಲು `ಆಧಾರ್ ಬಯೋ ಮೆಟ್ರಿಕ್' ವ್ಯವಸ್ಥೆ ಜಾರಿಗೊಳಿಸಲಾಗುವುದು
ಎಂದು ಆಡಳಿತಾಧಿಕಾರಿ ಟಿ.ಎಂ.ವಿಜಯ ಭಾಸ್ಕರ್ ತಿಳಿಸಿದರು.
ಬಿಬಿಎಂಪಿಯಲ್ಲಿ ಮಂಗಳವಾರ ನಡೆದ ಕಸ ವಿಲೇವಾರಿ ಮಾಡುವ ಗುತ್ತಿಗೆದಾರರು ಹಾಗೂ ವಾರ್ಡ್ ಎಂಜಿನಿಯರ್‍ಗಳ ಸಭೆ ಯಲ್ಲಿ ಹಾಜರು ವಿವರ ಪಡೆಯಲು ಆಧಾರ್ ಕಾರ್ಡ್ ಆಧರಿಸಿದ ಬಯೋಮೆಟ್ರಿಕ್ ವ್ಯವಸ್ಥೆ ತರಲಾಗುವುದು ಎಂದು ಪ್ರಕಟಿಸಿದರು. ನಿತ್ಯ ಬೆ.6.30ಕ್ಕೆ ಆರೋಗ್ಯ ಪರಿವೀಕ್ಷಕರು, ಪೌರಕಾರ್ಮಿಕರು ಹಾಜರಿಗೆ ಸಹಿ ಹಾಕುವಕೇಂದ್ರಗಳಿಗೆ ತೆರಳಿ ಕಾರ್ಮಿಕರ ಹಾಗೂವಾಹನಗಳ ವಿವರ ಪಡೆಯಬೇಕು. ಆದರೆ ಅಧಿಕಾರಿಗಳು ವಿವರ ಪಡೆಯುವ ಈ ವ್ಯವಸ್ಥೆಯನ್ನು ಸರಳೀಕರಣಗೊಳಿಸಿ ಕೆಲವೇ ಕ್ಷಣಗಳಲ್ಲಿ ಸಾರ್ವಜನಿಕವಾಗಿ ಲಭ್ಯವಾಗು ವಂತೆ ವೆಬ್‍ಸೈಟ್‍ನಲ್ಲಿ ಕಾಣುವಂತೆ ಮಾಡಲು ವ್ಯವಸ್ಥೆ ರೂಪಿಸಲಾಗುವುದು ಎಂದರು.
ಪಿಜಿಗಳ ಮೇಲೆ ಕ್ರಮ
ಮಹದೇವಪುರ ವಲಯದಲ್ಲಿ ಪಿಜಿಗಳು ಹೆಚ್ಚಿದ್ದು, ಮಾಲೀಕರು ಕಸ ವಿಲೇವಾರಿಗೆ ಗಮನ ಹರಿಸುತ್ತಿಲ್ಲ. ಹೆಚ್ಚಿನ ಪಿಜಿಗಳ ಮಾಲೀಕರು ಬಿಬಿಎಂಪಿಗೆ ಸೇರಿದ ಲಾರಿಗಳಲ್ಲಿ ಕಸ ಸಾಗಿಸುತ್ತಿದ್ದು, ಕೆಲವರು ಕಸವನ್ನು ಖಾಲಿ ನಿವೇಶನಗಳಲ್ಲಿ ಎಸೆಯುತ್ತಿದ್ದಾರೆ. ಇದರಿಂದಸೊಳ್ಳೆ ಉತ್ಪತ್ತಿಯಾಗಿ ಸಾಂಕ್ರಮಿಕ ರೋಗ ಹರಡುತ್ತಿದೆ. ವಲಯಗಳ ಎಂಜಿನಿಯರ್ ಗಳು ಪಿಜಿಗಳ ಮೇಲೆ ನಿಗಾ ಇರಿಸಿ, ಕಸ ಹಾಕುವ ಮಾಲೀಕರಿಗೆ ನೋಟಿಸ್ ಜಾರಿಮಾಡಬೇಕು. ರೈಲ್ವೆ ಹಳಿಗಳಲ್ಲಿ ಕಸದ ರಾಶಿ ಕಂಡು ಬರುತ್ತಿದ್ದು, ಇಲಾಖೆಯಿಂದ ಸ್ವಚ್ಛತಾ ಕಾರ್ಯ ನಡೆಯುತ್ತಿಲ್ಲ. ರೈಲ್ವೆ ಅಧಿಕಾರಿಗಳ ಸಭೆ ಕರೆದು ಈ ಬಗ್ಗೆ
ಚರ್ಚಿಸಲಾಗುವುದು ಎಂದರು. ಆಯುಕ್ತ ಕುಮಾರ್ ನಾಯಕ್ ಹಾಜರಿದ್ದರು.