ನಿರುಪಯುಕ್ತ ಕೆರೆ ಬಳಕೆಗೆ ವಿಧೇಯಕ
ನಿರುಪಯುಕ್ತ ಕೆರೆಗಳನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸಿಕೊಳ್ಳುವ ವಿಚಾರದಲ್ಲಿ ಸರ್ಕಾರ ಪ್ರತ್ಯೇಕ ವಿಧೇಯಕ ಜಾರಿಗೆ ತರಲಿದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಪುನರುಚ್ಚರಿಸಿದ್ದಾರೆ...
ಬೆಂಗಳೂರು: ನಿರುಪಯುಕ್ತ ಕೆರೆಗಳನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸಿಕೊಳ್ಳುವ ವಿಚಾರದಲ್ಲಿ ಸರ್ಕಾರ ಪ್ರತ್ಯೇಕ ವಿಧೇಯಕ ಜಾರಿಗೆ ತರಲಿದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಪುನರುಚ್ಚರಿಸಿದ್ದಾರೆ.
ಕೆಪಿಸಿಸಿ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರಿಂದ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ಕಾರ ಈ ನಿಟ್ಟಿನಲ್ಲಿ ಕಾನೂನು ಜಾರಿಗೆ ತರುವುದಕ್ಕೆ ನಿರ್ಧರಿಸಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರ ಜತೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಸುಪ್ರೀಂ ಕೋರ್ಟ್ ಆದೇಶ ಇರುವುದರಿಂದ ಕೆರೆ ಒತ್ತುವರಿ ತೆರವು ಅನಿವಾರ್ಯ. ಈ ಹಿನ್ನೆಲೆಯಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿದೆ. ಕೆರೆ ಒತ್ತುವರಿ ವಿಚಾರಲ್ಲಿ ಲಕ್ಷ್ಮಣರಾವ್ ಸಮಿತಿ ವರದಿ ಆಧರಿಸಿ ಸಮೀಕ್ಷೆ ನಡೆಸಿ ಕಾನೂನು ಇಲಾಖೆ ಪರಿಶೀಲನೆಗೆ ಕಳುಹಿಸಲಾಗಿದೆ ಎಂದರು. ಬಿಬಿಎಂಪಿ ಚುನಾವಣೆ ನಡೆಸುವುದಕ್ಕೆ ಸರ್ಕಾರ ಎಂದು ಅಂಜಿಲ್ಲ. ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಬಿಬಿಎಂಪಿ ವಿಭಜನೆ ಬಗ್ಗೆ ಭರವಸೆ ನೀಡಿದ್ದೆವು.
ಈ ಹಿನ್ನೆರಲೆಯಲ್ಲಿ ಸರ್ಕಾರ ಕ್ರಮಕ್ಕೆ ಮುಂದಾಗಿತ್ತು. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಚುನಾವಣೆ ನಡೆಸುತ್ತೇವೆ ಎಂದು ಹೇಳಿದರು. ರಾಜ್ಯದಲ್ಲಿ ನಕ್ಸಲ್ ಸಮಸ್ಯೆ ಕಡಿಮೆಯಾಗುತ್ತಿದೆ. ಇತ್ತೀಚೆಗೆ ಶೃಂಗೇರಿ ಭಾಗದಲ್ಲಿ ನಕ್ಸಲರ ಕರಪತ್ರ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಜಾಗೃತವಾಗಿದ್ದು, ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ಮಾಡುತ್ತಿದೆ.
ಇದರ ಜತೆಗೆ ಮುಖ್ಯವಾಹಿನಿಗೆ ಬರಲು ಸಿದ್ದರಿರುವವರಿಗೆ ಸರ್ಕಾರ ಸೂಕ್ತ ಪ್ಯಾಕೇಜ್ ನೀಡುವುದಕ್ಕೆ ಸಿದ್ದವಿದೆ ಎಂದರು. ಸಚಿವರ ಮೌಲ್ಯಮಾಪನ ಮಾಡುವ ವಿಚಾರ ಸಿಎಂ ಸಿದ್ದರಾಮಯ್ಯ ಹಾಗೂ ಹೈ ಕಮಾಂಡ್ ಗೆ ಬಿಟ್ಟ ವಿಚಾರ. ಮೌಲ್ಯ ಮಾಪನ ಮಾಡುವುದಕ್ಕೆ ಯಾರ ವಿರೋಧವೂ ಇಲ್ಲ. ನಾನು ಗೃಹ ಸಚಿವನಾಗಿ ಇನ್ನಷ್ಟು ಕೆಲಸ ಮಾಡಬೇಕಿದೆ. ಈ ಎರಡು ವರ್ಷದಲ್ಲಿ ಎಲ್ಲವನ್ನೂ ಮಾಡುವುದಕ್ಕೆ ಸಾಧ್ಯವಾಗಿಲ್ಲ ಎಂದು ಅಭಿಪ್ರಾಯಪಟ್ಟರು.