ಬೆಂಗಳೂರು: ಬೆಂಗಳೂರು ನಗರ ಪ್ರದೇಶ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು,`ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಸರ್ಕಾರ ಕೆರೆ ಹಾಗೂ ಸರ್ಕಾರಿ ಭೂಮಿ ಒತ್ತುವರಿ ತೆರವು ಮಾಡುತ್ತಿದೆ. ಸರ್ಕಾರದ ಈ ಕ್ರಮವನ್ನು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರೂ ಬೆಂಬಲಿಸಿದ್ದಾರೆ.
ಬಿಜೆಪಿಯವರು ಭೂ ಕಬಳಿಕೆದಾರರ ಜತೆ ಶಾಮೀಲು ಆಗಿರುವುದರಿಂದ ಈ ಕಾರ್ಯಾಚರಣೆಯನ್ನು ವಿರೋಧಿಸುತ್ತಿದ್ದಾರೆ' ಎಂದು ತಿರುಗೇಟು ನೀಡಿದರು. ಬೆಂಗಳೂರು ನಗರದಲ್ಲಿರುವ ನಿರುಪಯುಕ್ತ ಕೆರೆಗಳನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಕೆ ಮಾಡುವ ವಿಚಾರದಲ್ಲಿ ಸರ್ಕಾರ ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ 14 ಕೆರೆ ವ್ಯಾಪ್ತಿಯಲ್ಲಿ ಕಟ್ಟಡಗಳ ನಿರ್ಮಾಣವಾಗಿದ್ದು, ಅವುಗಳ ತೆರವಿಗೆ ಸರ್ಕಾರ ಚಿಂತನೆ ನಡೆಸಿದೆ ಎಂದರು.