ಬೆಂಗಳೂರು: ಚೀಟಿ ದುಡ್ಡು ವಾಪಸ್ ಕೇಳಿದ ಮನೆ ಬಾಡಿಗೆದಾರನನ್ನೇ ಕೊಲೆ ಮಾಡಿದ ಬಾಡಿಗೆ ಮನೆ ಮಾಲೀಕ ಹಾಗೂ ಆತನ ನಾಲ್ವರು ಸ್ನೇಹಿತರನ್ನು ಕುಮಾರಸ್ವಾಮಿ ಬಡಾವಣೆ ಪೊಲೀಸರು ಬಂಧಿಸಿದ್ದಾರೆ.
ಕುಮಾರಸ್ವಾಮಿ ಬಡಾವಣೆ ರಾಮಕೃಷ್ಣ ನಗರ 2ನೇ ಕ್ರಾಸ್ ನಿವಾಸಿ ವೆಂಕಟೇಶ ಎಂಬುವವರ ಪುತ್ರ ಯೋಗೇಶ್ (24), ಆತನ ಸ್ನೇಹಿತರಾದ ಪ್ರದೀಪ್ (24), ಸಂತೋಷ್ (26), ಸತ್ಯ (25) ಮತ್ತು ನವೀನ್ (23) ಬಂಧಿತರು. ಏ.29ರ ರಾತ್ರಿ ಕನ್ಯಾಕುಮಾರಿ ಮೂಲದ ಹಳೇ ವಾಹನಗಳ ಡೀಲರ್ ಸುನೀಲ್ ಕುಮಾರ್‍ನನ್ನು(28) ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದರು. ಕೊಲೆಯಾದ ಸುನೀಲ್ ಕುಮಾರ್, ವೆಂಕಟೇಶ್ ಅವರ ಮನೆಯಲ್ಲಿ ಕೆಲವು ವರ್ಷಗಳಿಂದ ರು.4.5 ಲಕ್ಷಕ್ಕೆ ಭೋಗ್ಯಕ್ಕೆ ಇದ್ದರು. ಹಳೇ ವಾಹನಗಳ ಡೀಲರ್ ಆಗಿದ್ದು ಫೈನಾನ್ಸ್ ಕೂಡಾ ಮಾಡುತ್ತಿದ್ದರು. ವೆಂಕಟೇಶ್ ಅವರ ಪುತ್ರ ಆರೋಪಿ ಯೋಗೇಶ್ ಕೂಡಾ ಹಳೇ ವಾಹನಗಳ ಡೀಲರ್ ಆಗಿದ್ದ. ಜತೆಗೆ ಚೀಟಿ ವ್ಯವಹಾರ ಮಾಡುತ್ತಿದ್ದ.
ಈತನ ಬಳಿ ಸುನೀಲ್ ಚೀಟಿ ಹಣ ಕಟ್ಟಿದ್ದು ಒಂದೂವರೆ ಲಕ್ಷವಾಗಿತ್ತು. ಇತ್ತೀಚೆಗೆ ಮನೆಯ ಭೋಗ್ಯದ ಅವಧಿ ಮುಗಿದಿದ್ದರಿಂದ ಹಣ ವಾಪಸ್ ಮಾಡಬೇಕು. ಚೀಟಿ ಹಣ ನೀಡುವಂತೆ ಕೇಳಿದ್ದ. ಆದರೆ, ಯೋಗೇಶ್ ಚೀಟಿ ಹಣ ನೀಡದೆ ಸತಾಯಿಸುತ್ತಿದ್ದ. ಈ ವಿಚಾರವಾಗಿ ಇಬ್ಬರಿಗೂ ಜಗಳವಾಗಿತ್ತು. ಹೀಗಾಗಿ, ಹಣ ವಾಪಸ್ ಮಾಡದಿದ್ದರೆ ನಿನಗೆ ಒಂದು ಗತಿ ಕಾಣಿಸುತ್ತೇನೆ ಎಂದು ಸುನೀಲ್, ಯೋಗೇಶ್‍ಗೆ ಬೆದರಿಕೆ ಹಾಕಿದ್ದ.
ಸ್ನೇಹಿತರೊಂದಿಗೆ ಕೊಲೆ ಸ್ಕೆಚ್: ಯೋಗೇಶ್ ತನ್ನ ಸ್ನೇಹಿತರೊಂದಿಗೆ ಸೇರಿ ಸುನೀಲ್ ಹತ್ಯೆಗೆ ಸಂಚು ರೂಪಿಸಿ, ಇದಕ್ಕಾಗಿ ತನ್ನ ಅಂಗಡಿಯಲ್ಲೇ ಕೆಲಸ ಮಾಡುವ ಪ್ರದೀಪ್ ನೆರವು ಪಡೆದಿದ್ದ. ಪ್ರದೀಪ್, ತನ್ನ ಸ್ನೇಹಿತರಾದ ಸಂತೋಷ್, ಸತ್ಯ ಹಾಗೂ ನವೀನ್‍ನನ್ನು ಸೇರಿಸಿಕೊಂಡಿದ್ದ. ಗುರುವಾರ ರಾತ್ರಿ ಮನೆಯಲ್ಲಿ ಸುನೀಲ್ ಮಲಗಿದ್ದ ವೇಳೆ ಐವರು ಆರೋಪಿಗಳು 12 ಗಂಟೆ ಸುಮಾರಿಗೆ ಮನೆ ಬಾಗಿಲು ಬಡಿದಿದ್ದಾರೆ. ಸುನೀಲ್ ಹೊರಗೆ ಬಂದಾಗ ಕಣ್ಣಿಗೆ ಖಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು.
ಮನೆ ಮುಂದೆ ಶವ ಬಿದ್ದಿರುವುದನ್ನು ಗಮನಿಸಿದ ನೆರೆಹೊರೆಯವರು ಪೆÇಲೀಸರಿಗೆ ಮÁಹಿತಿ ನೀಡಿದ್ದರು. ತನಿಖೆ ಆರಂಬಿsಸಿದ ಕುಮಾರಸ್ವಾಮಿ ಬಡಾವಣೆ ಇನ್ಸ್ ಪೆಕ್ಟರ್ ಲೋಕೇಶ್ ಕುಮಾರ್ ನೇತೃತ್ವದ ತಂಡಕ್ಕೆ ಆರಂಭದಲ್ಲೇ ಯೋಗೇಶ್ ಹಾಗೂ ಸುನೀಲ್ ನಡುವೆ ಹಣಕಾಸಿನ ವಿಚಾರವಾಗಿ ಜಗಳ ಆಗಿರುವುದು ತಿಳಿದು ಬಂದಿತ್ತು. ಕೂಡಲೇ ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕೃತ್ಯ ಎಸಗಿದ್ದನ್ನು ಒಪ್ಪಿಕೊಂಡಿದ್ದಾನೆ. ಬಳಿಕ ವಿವಿಧೆಡೆ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಹಣ ಪಡೆಯಲು ಬಂದು ಸಿಕ್ಕಿಬಿದ್ದರು
ಸುನೀಲ್‍ನ ಹತ್ಯೆ ಮಾಡಿದ ಬಳಿಕ ಪ್ರದೀಪ್, ಸಂತೋಷ್, ಸತ್ಯ ಮತ್ತು ನವೀನ್ ಹಾಗೂ ಯೋಗೇಶ್ ಪ್ರತ್ಯೇಕವಾಗಿ ಪರಾರಿಯಾಗಿದ್ದರು. ಹೀಗಾಗಿ ಸುನೀಲ್ ಕೊಲೆ ಪ್ರಕರಣದಲ್ಲಿ ಯೋಗೇಶ್ ಕೈವಾಡದ ಇರುವ ಬಗ್ಗೆ ಪೊಲೀಸರಿಗೆ ಅನುಮಾನವಿತ್ತು. ರಾಜ್ಯದ ಬೇರೆ ಕಡೆ ತೆರಳಿ ತಲೆಮರೆಸಿಕೊಂಡಿದ್ದ ಪ್ರದೀಪ್ ಮತ್ತು ಆತನ ಸ್ನೇಹಿತರು ಹಣವಿಲ್ಲದೆ ಯೋಗೇಶ್‍ಗೆ ಕರೆ ಮಾಡಿ ಹಣ ಕೇಳಿದ್ದರು. ಕನಕಪುರ ರಸ್ತೆ ಸಮೀಪದ ವಜ್ರಮುನೇಶ್ವರಸ್ವಾಮಿ ದೇವಸ್ಥಾನದ ಬಳಿ ಬಂದರೆ ಹಣ ನೀಡುವುದಾಗಿ ಯೋಗೇಶ್ ಎಲ್ಲರನ್ನು ಕರೆಸಿಕೊಂಡಿದ್ದ. ಈ ಮಾಹಿತಿ ಸಂಗ್ರಹಿಸಿದ ಪೊಲೀಸರು ಮಫ್ತಿಯಲ್ಲಿ ತೆರಳಿ ಬಂಧಿಸಿದ್ದಾರೆ.