ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಸೇರಿ ನಾಲ್ವರು ಸಲ್ಲಿಸಿದ ಮೇಲ್ಮನವಿ ಅರ್ಜಿಯ ಅಂತಿಮ ತೀರ್ಪು ಮೇ 11ರಂದು ಹೊರ ಬೀಳಲಿದೆ.
ಹೈಕೋರ್ಟ್‍ನ ಕೊಠಡಿ ಸಂಖ್ಯೆ 14ರಲ್ಲಿ ಬೆಳಗ್ಗೆ 11 ಗಂಟೆ ವೇಳೆಗೆ ವಿಶೇಷ ನ್ಯಾಯಪೀಠದ ನ್ಯಾ.ಸಿ.ಆರ್.ಕುಮಾರಸ್ವಾಮಿ ಅವರ ಏಕಸದಸ್ಯ ಪೀಠ ಮೇಲ್ಮನವಿಯ ಅಂತಿಮ ತೀರ್ಪು ಪ್ರಕಟಿಸಲಿದೆ.
ಅಂದು ಜಯಲಿತಾ, ಇಳವರಸಿ, ಶಶಿಕಲಾ ಮತ್ತು ಸುಧಾಕರನ್ ಅವರ ಹಣೆಬರಹ ನಿರ್ಧಾರವಾಗಲಿದೆ. ಈ ಮೇಲ್ಮನವಿ ವಿಚಾರಣೆ 2015ರ ಮಾರ್ಚ್ 11ರಂದು ಪೂರ್ಣಗೊಳಿಸಿದ್ದ ನ್ಯಾ.ಸಿ.ಆರ್.ಕುಮಾರ ಸ್ವಾಮಿ ಅವರ ವಿಶೇಷ ಏಕ ಸದಸ್ಯ ಪೀಠ ತೀರ್ಪು ಕಾಯ್ದಿರಿಸಿತ್ತು. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಗೆ ನಾಲ್ಕು ವರ್ಷ ಜೈಲು ಶಿಕ್ಷೆ ಮತ್ತು ರು. 100 ಕೋಟಿ ದಂಡ ವಿಧಿಸಿದ್ದ ಅಧೀನ ನ್ಯಾಯಾಲಯ ತೀರ್ಪು ಪ್ರಶ್ನಿಸಿ ಜಯಲಲಿತಾ ಸೇರಿ ನಾಲ್ವರು ಹೈಕೋರ್ಟ್ ಮೆಟ್ಟಿಲೇರಿದ್ದರು.