ಬೆಂಗಳೂರು: ಭೂಪರಿವರ್ತನೆಗೆ ರು.2.24 ಲಕ್ಷ ಲಂಚ ಪಡೆದ ಹೊಸಕೋಟೆ ತಹಸೀಲ್ದಾರ್ ಎಚ್.ಕೊಟ್ರೇಶ್, ಸೂಲಿಬೆಲೆ ವೃತ್ತದ ಕಂದಾಯ ನಿರೀಕ್ಷಕ ಶ್ರೀನಿವಾಸ ಶೆಟ್ಟಿ ಹಾಗೂ ಹೊಸಕೋಟೆ ತಹಸೀಲ್ದಾರ್ ಕಚೇರಿ ದ್ವಿತೀಯ ದರ್ಜೆ ಸಹಾಯಕ ಕೆ.ನಾಗರಾಜು ಹಾಗೂ ಖಾಸಗಿ ವ್ಯಕ್ತಿ ಮುನಿಯಪ್ಪ ಎಂಬುವವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಎಚ್.ಮಧು ಎಂಬುವವರು ಬಾಗಲೂರು ಗ್ರಾಮದಲ್ಲಿರುವ ಸರ್ವೆ ಸಂಖ್ಯೆ 31/9ರಲ್ಲಿರುವ ತಮ್ಮ 6.34 ಎಕರೆ ಜಮೀನು ಭೂಪರಿವರ್ತನೆ ಮಾಡಿಸಿಕೊಳ್ಳಲು ಹೊಸಕೋಟೆ ತಹಸೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ವಿಚಾರವಾಗಿ ತಹಸೀಲ್ದಾರ್, ದ್ವಿತೀಯ ದರ್ಜೆ ಸಹಾಯಕ ಹಾಗೂ ಕಂದಾಯ ನಿರೀಕ್ಷಕರನ್ನು ಭೇಟಿ ಮಾಡಿ ವಿಚಾರಿಸಿದಾಗ ಜಮೀನಿನ ಭೂ ಪರಿವರ್ತನೆಗೆ ರು.2.24 ಲಕ್ಷ ಲಂಚ ನೀಡಲೇಬೇಕೆಂದು ಒತ್ತಾಯಿಸಿದ್ದರು. ಅದಾಗಲೇ ಲಂಚ ನೀಡಿದ್ದ ಮಧು ಅವರಿಗೆ ಮತ್ತೆ ಲಂಚ ನೀಡಲು ಇಷ್ಟವಿಲ್ಲದ ಕಾರಣ ಬೆಂಗಳೂರು ಗ್ರಾಮಾಂತರ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
3ನೇ ಆರೋಪಿ ದ್ವಿತೀಯ ದರ್ಜೆ ಸಹಾಯಕ ನಾಗರಾಜು ಅವರ ಸೂಚನೆಯಂತೆ ಮಂಗಳವಾರ (ಮೇ 19) 4ನೇ ಆರೋಪಿ ಮುನಿರಾಜು, ದೂರುದಾರರಿಂದ ರು.2.24 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ. ಬಳಿಕ ತಹಸೀಲ್ದಾರ್ ಕೊಟ್ರೇಶ್ ಹಾಗೂ ಕಂದಾಯ ನಿರೀಕ್ಷಕ ಶ್ರೀನಿವಾಸ್ ಶೆಟ್ಟಿ ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ