ಬೆಂಗಳೂರು: ಒಂಟಿ ಮಹಿಳೆ ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿ, ಹಲ್ಲೆ ನಡೆಸಿದ ಯುವಕರಿಬ್ಬರನ್ನು ಮರಕ್ಕೆ ಕಟ್ಟಿ ಹಾಕಿದ ಸ್ಥಳೀಯರು ಹಿಗ್ಗಾ ಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಹೆಬ್ಬಗೋಡಿ ಬಳಿಯ ಮಾರಗೊಂಡನಹಳ್ಳಿಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಬೀದರ್ ಮೂಲದ ಸೋಮನಾಥ (22) ಮತ್ತು ಶ್ರೀಕಾಂತ (24) ಸಾರ್ವಜನಿಕರಿಂದ ಥಳಿತಕ್ಕೊಳಗಾದವರು. ಇವರ ವಿರುದ್ಧ ಅತ್ಯಾಚಾರ ಯತ್ನ ಹಾಗೂ ಕೊಲೆ ಯತ್ನ ಪ್ರಕರಣವನ್ನು ಹೆಬ್ಬಗೋಡಿ ಪೊಲೀಸರು ದಾಖಲಿಸಿಕೊಂಡಿದ್ದಾರೆ. ನೊಂದ ಮಹಿಳೆ ವಾಸವಿರುವ ನೆರೆಮನೆಯಲ್ಲಿ ಆರೋಪಿ ಸೋಮನಾಥ ವಾಸವಿದ್ದು, ಸಮೀಪದಲ್ಲಿಯೇ ಶ್ರೀಕಾಂತ ಕೂಡಾ ವಾಸವಿದ್ದ. ಆರೋಪಿಗಳಿಬ್ಬರೂ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಸೋಮನಾಥ ಮನೆ ಖಾಲಿ ಮಾಡಿ ಬೇರೆ ಪ್ರದೇಶದಲ್ಲಿ ನೆಲೆಸಿದ್ದ. ಮನೆ ಖಾಲಿ ಮಾಡುವಾಗ ಸೋಮನಾಥ ಬಿಟ್ಟು ಹೋಗಿದ್ದ ಟೇಬಲ್ ಫ್ಯಾನ್‍ವೊಂದನ್ನು ನೆರೆಮನೆಯಲ್ಲಿ ವಾಸವಿದ್ದ ನೊಂದ ಮಹಿಳೆ ತನ್ನ ಮನಗೆ ಕೊಂಡೊಯ್ದಿದ್ದು ವಾಪಸ್ ಕೊಟ್ಟಿರಲಿಲ್ಲ ಎನ್ನಲಾಗಿದೆ. ಆತನನ್ನು ಮೊಬೈಲ್ ಕಳ್ಳ ಎಂದು ನಿಂದಿಸಿದ್ದಳಂತೆ.
ಚಾವಣಿ ಒಡೆದು ಒಳ ಬಂದರು
ಮಹಿಳೆಯ ವರ್ತನೆಯಿಂದ ಕುಪಿತಗೊಂಡಿದ್ದ ಆರೋಪಿಗಳಿಬ್ಬರು ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಆಕೆಯ ಮನೆಗೆ ಹೋಗಿದ್ದಾರೆ. ಗಂಡ ಮನೆಯಲ್ಲಿಲ್ಲ, ಅವರು ಬಂದ ನಂತರ ಬರುವಂತೆ ಹೇಳಿದ ಮಹಿಳೆ, ಬಾಗಿಲು ತೆಗೆಯಲಿಲ್ಲ. ಆಗ ಹೊರಗಿಂದ ಚಿಲಕ ಹಾಕಿದ ಆರೋಪಿಗಳು, ಚಾವಣಿಯ ಸಿಮೆಂಟ್ ಶೀಟ್ ಒಡೆದು ಮನೆ ಒಳಗೆ ನುಗ್ಗಿದ್ದಾರೆ. ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಾಗ ವಿರೋಧ ವ್ಯಕ್ತಪಡಿಸಿದ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕ್ರೂರವಾಗಿ ನಡೆದುಕೊಂಡಿದ್ದಾರೆ. ಕಿರುಚಾಟ ಕೇಳಿಸಿಕೊಂಡು ನೆರೆಹೊರೆಯವರು ಹೊರಗೆ ಬಂದಾಗ ಆರೋಪಿಗಳು ಪರಾರಿಯಾಗಿದ್ದರು. ರಾತ್ರಿಯಿಡಿ ತಲೆಮರೆಸಿಕೊಂಡಿದ್ದ ಆರೋಪಿಗಳು ಬುಧವಾರ ಬೆಳಗ್ಗೆ ಮನೆಗೆ ಬಂದಿದ್ದರು.
ಇವರಿಗಾಗಿಯೇ ಕಾಯುತ್ತಿದ್ದ ಸ್ಥಳೀಯರು, ಇಬ್ಬರನ್ನು ಹೊರಗೆ ಎಳೆತಂದು ವಿವಸ್ತ್ರಗೊಳಿಸಿ, ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ಹೆಬ್ಬಗೋಡಿ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.