ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ(ಆರ್ ಜಿಎಚ್‍ಯು) ಸ್ಥಾಪನೆಗೆ ಅಡ್ಡಿಯಾಗಿರುವ ಸಮಸ್ಯೆ ಪರಿಹರಿಸುವ ಹೊಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಹೆಗಲಿಗೇರಿಸಿದ್ದಾರೆ.
ವಿಧಾನಸೌಧದಲ್ಲಿ ನಡೆದ ರಾಮನಗರ ಅಭಿವೃದ್ಧಿ ಕುರಿತ ಜನಪ್ರತಿನಿಧಿಗಳ ಸಭೆಯಲ್ಲಿ ಆರೋಗ್ಯ ವಿವಿ ಸ್ಥಾಪನೆ ಕುರಿತು ಇರುವ ಅಡೆತಡೆಗಳ ಬಗ್ಗೆ ವಿಸ್ತøತ ಚರ್ಚೆ ನಡೆಯಿತು. ಅಂತಿಮವಾಗಿ ವಿವಿಗೆ ಅಡ್ಡಿಯಾಗಿರುವ ಜಾಗದ ಸಮಸ್ಯೆಯನ್ನು ನಿವಾರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಇಂಧನ ಸಚಿವರಿಗೆ ಸೂಚಿಸಿದ್ದಾರೆ.
ಸಭೆಯ ನಂತರ ಮಾಹಿತಿ ನೀಡಿದ ಡಿ.ಕೆ. ಶಿವಕುಮಾರ್, ವಿಶ್ವವಿದ್ಯಾಲಯಕ್ಕೆ ರಾಮನಗರ ಸಮೀಪದ ಅರ್ಚಕರಹಳ್ಳಿಯಲ್ಲಿ 216 ಎಕರೆ ಜಾಗದ ಅವಶ್ಯಕತೆ ಇದ್ದು 145 ಎಕರೆ ಹಸ್ತಾಂತರವಾಗಿದೆ. ಉಳಿದ 92 ಎಕರೆ ಜಾಗಕ್ಕೆ ಸಂಬಂಧಿಿಸಿದಂತೆ ಪ್ರಕರಣ ನ್ಯಾಯಾಲಯದಲ್ಲಿದ್ದು, ರೈತರೊಂದಿಗೆ ಮತ್ತೆ ಮಾತುಕತೆ ನಡೆಸಲು ಸಿಎಂ ಸೂಚಿಸಿದ್ದಾರೆ ಎಂದು ಹೇಳಿದರು.
ಕಾನೂನಿನ ವ್ಯಾಪ್ತಿಯಲ್ಲಿ ರೈತರಿಗೆ ಯಾವೆಲ್ಲ ಸಹಕಾರ ಕೊಡಬೇಕೋ ಅವೆಲ್ಲವನ್ನೂ ಕೊಡುತ್ತೇವೆ. ಅವರ ಮನವೊಲಿಸಿ ವಿವಿಗೆ ಅಗತ್ಯ ಜಾಗವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತೇವೆಂದು ಶಿವಕುಮಾರ್ ಇದೇ ಸಂದರ್ಭದಲ್ಲಿ ತಿಳಿಸಿದರು.
ಹಣ ಬಿಡುಗಡೆ:
ರೇಷ್ಮೆ ಗೂಡು ಮತ್ತು ರೇಷ್ಮೆ ನೂಲಿನ ದರ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ತಹಬದಿಗೆ ತರುವ ಉದ್ದೇಶದಿಂದ ಸರ್ಕಾರ ರೇಷ್ಮೆ ಇಲಾಖೆಗೆ ರು.30 ಕೋಟಿ ಬಿಡುಗಡೆ ಮಾಡುತ್ತಿದೆ. ಕುಸಿತ ಕಂಡಿರುವ ಕಚ್ಚಾ ರೇಷ್ಮೆಯನ್ನು ಇಲಾಖೆ ಖರೀದಿಸುವ ಮೂಲಕ ಬೆಲೆಯನ್ನು ಸ್ಥಿರೀಕರಿಸಲು ಪ್ರಯತ್ನಿಸಲಾಗುತ್ತದೆ ಎಂದರು. ಅದೇ ರೀತಿ ರಾಮನಗರಕ್ಕೆ ಹೆಚ್ಚುವರಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸುವಂತೆ ಮತ್ತು ಬೈರಮಂಗಲ ಕೆರೆಯ ನೀರನ್ನು ಸಂಸ್ಕರಿಸಿ ಬೇರೆ ಬೇರೆ ಕೆರೆಗಳನ್ನು ತುಂಬಿಸುವ ಯೋಜನೆಯನ್ನು ಕಾರ್ಯಗತ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.