ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಅನುಪಯುಕ್ತ ಕಟ್ಟಡಗಳನ್ನು ಗುರುತಿಸಿ ಅಂಗನವಾಡಿ ಕೇಂದ್ರವಾಗಿ ಮಾರ್ಪಾಡು ಮಾಡಲು ಕ್ರಮ ಕೈಗೊಳ್ಳುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ.
ನಗರದ ಜೈನ ಕಾಲೇಜ್ ನಲ್ಲಿ ಸಿವಿಕ್ ಬೆಂಗಳೂರು ಮತ್ತು ಬ್ರಿಡ್ಜ್ ನೆಟ್ವರ್ಕ್ ಸಂಸ್ಥೆ ಆಯೋಜಿಸಿದ್ದ ಅಂಗನವಾಡಿ ಬಗ್ಗೆ ಸಾರ್ವಜನಿಕರ ಸಮಾಲೋಚನೆ ಹಾಗೂ ಅಂಗನವಾಡಿಗಳತ್ತ ಒಂದು ನೋಟ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಂಗನವಾಡಿ ಕೇಂದ್ರಗಳ ನಿರ್ಮಾಣ ಹಾಗೂ ಈಗಿರುವ ಅಂಗನವಾಡಿಗಳಿಗೆ ಬೇಕಿರುವ ಅಗತ್ಯ ಸೌಲಭ್ಯ ಗಳನ್ನು ಉತ್ತಮಗೊಳಿಸಲು ಸಂಬಂಧಪಟ್ಟ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ನೀಡುವುದಾಗಿ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಮಾತನಾಡಿದ ಸಮಾಜ ಪರಿವರ್ತನಾ ಜನಾಂದೋಲನದ ರಾಜ್ಯ ಸಂಘಟಕ ವೈ.ಮರಿಸ್ವಾಮಿ, ಶೌಚಾಲಯಗಳ ಮಧ್ಯೆ ಅಂಗನವಾಡಿ ಕೇಂದ್ರ ನಡೆಸುತ್ತಿರುವ ಉದಾಹರಣೆ ನಮ್ಮ ಕಣ್ಣುಮುಂದಿದೆ ಅಂಗನವಾಡಿಗಳಿಗೆ ಇಂತಹ ಪರಿಸ್ಥಿತಿ ಎದುರಾಗಿರುವುದು ಶೋಚನೀಯ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಹೈಕೋರ್ಟ್ ನ್ಯಾ.ಏನ್.ಕೆ ಪಾಟೀಲ್ ವರದಿ ಪ್ರಕಾರ ಅಂಗನವಾಡಿ ಕೇಂದ್ರಗಳು ನೋಡಲು ಆಕರ್ಷಕವಾಗಿರಬೇಕು, ಬಾಲಕ-ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇರಬೇಕು. ಆದರೆ ಈಗಿರುವ ಯಾವುದೇ ಅಂಗನವಾಡಿಗಳಲ್ಲಿ ಅಂತಹ ಶೌಚಾಲಯದ ವ್ಯವಸ್ಥೆ ಇಲ್ಲ ಎಂದು ಮಾಹಿತಿ ನೀಡಿದರು.
ನಗರದಲ್ಲಿ ಕೇವಲ 85 ,480 ಮಕ್ಕಳಿಗೆ ಮಾತ್ರ ಅಂಗನವಾಡಿ ಸೇವೆ ಲಭ್ಯವಾಗಿದೆ 3 ,35,655 ಮಕ್ಕಳು ಇಂದು ಅಂಗನವಾಡಿಯಿಂದ ಹೊರಗುಳಿದಿದ್ದಾರೆ. ಈಗಿರುವ ಪರಿಸ್ಥಿತಿಯಲ್ಲಿ ನಗರಕ್ಕೆ 8 ,391 , ಅಂಗನವಾಡಿ ಕೇಂದ್ರಗಳು ಅಗತ್ಯವಿದೆ ಎಂದು ಸಿವಿಕ್ ಬೆಂಗಳೂರಿನ ಕಾರ್ಯಕಾರಿ ಟ್ರಸ್ಟ್ ನ ಕಾತ್ಯಾಯಿನಿ ಅಂಗನವಾಡಿಗಳ ಕುರಿತಾದ ಅಂಕಿಅಂಶಗಳ ವಿವರಣೆ ನೀಡಿದರು.