ಬೆಂಗಳೂರು: ಅನಧಿಕೃತ ವಿಡಿಯೋಗೇಮ್ಸ್ ಕೇಂದ್ರಗಳ ಮೇಲೆ ಸಿಸಿಬಿ ಪೊಲೀಸರ ಕಾರ್ಯಾಚರಣೆ ಮುಂದುವರೆದಿದ್ದು, ಒಂದೇ ದಿನದಲ್ಲಿ 3 ಕೇಂದ್ರಗಳ ಮೇಲೆ ದಾಳಿ ನಡೆಸಿ 71 ಮಂದಿಯನ್ನು ಬಂಧಿಸಿದ್ದಾರೆ.
ನಗರದಲ್ಲಿ ಅನಧಿಕೃತ ವಿಡಿಯೋಗೇಮ್ಸ್ ಕೇಂದ್ರಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕ್ರಮ ಕೈಗೊಂಡಿರುವ ಬೆಂಗಳೂರಿನ ಸಿಸಿಬಿ ಪೊಲೀಸರು, ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಸ್ಟಾರ್ ಗೋಲ್ಡ್ ಗೇಮ್ಸ್ ಅಂಗಡಿ ಮೇಲೆ ದಾಳಿ ಮಾಡಿ 15 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ 35 ಸಾವಿರ ನಗದು, ಡಿವಿಆರ್ ಹಾಗೂ 23 ವಿಡಿಯೋ ಗೇಮ್ಸ್ ಯಂತ್ರಗಳನ್ನು ವಶಪಡಿಸಿಕೊಂಡ ಪೊಲೀಸರು ನಂತರ ಶಂಕರಪುರ ಹಾಗೂ ಕೆಂಪೇಗೌಡ ನಗರ ವ್ಯಾಪ್ತಿಯಲ್ಲಿನ ವಿಡಿಯೋಗೇಮ್ಸ್ ಅಡ್ಡೆ ಮೇಲೆ ದಾಳಿ ಮಾಡಿ 11 ಮಂದಿಯನ್ನು ಬಂಧಿಸಿದ್ದಾರೆ.
ವಿಡಿಯೋ ಗೇಮ್ಸ್ ಕೇಂದ್ರಗಳಲ್ಲಿ ಹಣವನ್ನು ಪಣವಾಗಿ ಕಟ್ಟಿ ಜೂಜಾಟದಲ್ಲಿ ಪಾಲ್ಗೊಳ್ಳುತ್ತಿರುವ ಬಗ್ಗೆ ಮಾಹಿತಿ ಪಡೆಯುತ್ತಿರುವ ಪೊಲೀಸರು ಇದೀಗ ಅನಧಿಕೃತ ವಿಡಿಯೋ ಗೇಮ್ಸ್ ಕೇಂದ್ರಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಈ ಹಿಂದೆ ಉಪ್ಪಾರ ಪೇಟೆ ಹಾಗೂ ಚಿಕ್ಕಪೇಟೆ ವ್ಯಾಪ್ತಿಯಲ್ಲಿ ಬರುವ ಎರಡು ವಿಡಿಯೋ ಗೇಮ್ಸ್ ಕೇಂದ್ರಗಳ ಮೇಲೆ ದಾಳಿ ನಡೆಸಿದ್ದ ಪೊಲೀಸರು 53 ಜನರನ್ನು ಬಂಧಿಸಿದ್ದರು. ದಾಳಿ ವೇಳೆ ವೀಡಿಯೋಗೇಮ್ಸ್ ಮಾಲೀಕ ತಲೆಮರೆಸಿಕೊಂಡಿದ್ದನು. ಬಂಧಿತರಿಂದ 80 ಸಾವಿರ ನಗದು, ಎರಜು ಸಿಸಿಟಿವಿ ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.