ಬೆಂಗಳೂರು: ತಮಗೆ ನೀಡಿದ್ದ ವಿದ್ಯುತ್ತನ್ನು ಬೇರೆಯವರಿಗೆ ನೀಡಿ ಅಕ್ರಮವೆಸಗಿದ ಎರಡು ಕಂಪನಿಗಳಿಗೆ ಬೆಸ್ಕಾಂ ಜಾಗೃತದಳ ರು.13 ಕೋಟಿಗೂ ಹೆಚ್ಚು ದಂಡ ವಿಧಿಸಿದೆ.
ಹೊಸೂರು ರಸ್ತೆಯ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿರುವ ಅಕ್ವಾಮಾಲ್ ವಾಟರ್ ಸಲ್ಯೂಷನ್ ಪ್ರೈ.ಗೆ ನೀಡಿದ್ದ ವಿದ್ಯುತ್ತನ್ನು ಅನಧಿಕೃತವಾಗಿ ಶೆಲ್ ಇಂಡಿಯಾ ಮಾರ್ಕೆಟ್‍ಗೆ ಅಕ್ರಮವಾಗಿ ಸಂಪರ್ಕ ಕಲ್ಪಿಸಿತ್ತು. ಅಕ್ವಾಮಾಲ್ ಕಂಪನಿಗೆ ರು.10 ಕೋಟಿ, ಆನೇಕಲ್ ಬಳಿಯ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿರುವ ರಾಧಾಮಣಿ ಟೈಕ್ಸ್‍ಟೈಲ್ಸ್ ಗಾರ್ಮೆಂಟ್ಸ್ ಫ್ಯಾಕ್ಟರಿ ತಾವು ತೆಗೆದುಕೊಂಡಿದ್ದ ವಿದ್ಯುತ್ತನ್ನು ಯಾಜಕಿ ಇಂಡಿಯಾ ಪ್ರೈ.ಲಿ ಗೆ ಸಂಪರ್ಕ
ನೀಡಿರುವುದಕ್ಕೆ ರು.3 ಕೋಟಿ ದಂಡ ವಿಧಿಸಲಾಗಿದೆ ಎಂದು ಬೆಸ್ಕಾಂ ಜಾಗೃತದಳದ ಪೊಲೀಸ್ ಅಧೀಕ್ಷಕ ಎ.ಎನ್. ಪ್ರಕಾಶಗೌಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅಕ್ವಾಮಾಲ್ ಕಂಪನಿಗೆ ಮಂಜೂರಾದ 1250 ಕೆವಿ ವಿದ್ಯುತ್ ಪ್ರಮಾಣವನ್ನು ಖಾಸಗಿ ಮಾಪಕ ಎಲ್.ಟಿ. ಪ್ಯಾನಲ್‍ನಲ್ಲಿ ಅಳವಡಿಸಿಕೊಂಡು ಅದರ ಮುಖಾಂತರ ಶೆಲ್ ಕಂಪನಿಗೆ ವಿದ್ಯುತ್ ನೀಡಿತ್ತು. 2007ರಿಂದ ಈ ರೀತಿ ಮಾಡಿದ್ದು ಸೂಕ್ತ ಮಾಹಿತಿ ಮೇರೆಗೆ ದಾಳಿ ನಡೆಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಅಕ್ರಮ ವಿದ್ಯುತ್ ಬಳಸಿದ್ದಕ್ಕೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು.
ಅರ್ಧ ಭಾಗ ಬಾಡಿಗೆಗೆ:
ರಾಧಾಮಣಿ ಟೆಕ್ಸ್ ಟೈಲ್ಸ್ ಪ್ರೈ.ಲಿನ ಫ್ಯಾಕ್ಟರಿಯ ಅರ್ಧಭಾಗವನ್ನು ಯಾಜಕಿ ಇಂಡಿಯಾದವರಿಗೆ ಬಾಡಿಗೆ ನೀಡಿ ಅವರಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಿತ್ತು. ಅವರಿಗೆ ರು.3 ಕೋಟಿ ದಂಡ ವಿಧಿಸಲಾಗಿದೆ. ಈ ಪ್ರಕರಣ ಕುರಿತು ಪರಿಶೀಲನೆ ನಡೆಯುತ್ತಿದೆ. ಇದರಲ್ಲಿ ಬೆಸ್ಕಾಂ ಅಧಿಕಾರಿಗಳು ಶಾಮೀಲಾಗಿದ್ದರೆ ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ಬೆಂಗಳೂರಿನ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಬೆಸ್ಕಾಂ ಗಮನಕ್ಕೆತಾರದೆ ವಿದ್ಯುತ್ ಬಳಸಿಕೊಳ್ಳಲಾಗಿತ್ತು. ಹೀಗಾಗಿ ರು.13 ಕೋಟಿ ದಂಡ ವಿಧಿಸಲಾಗಿದೆ. ಈ ಕುರಿತಂತೆ ನಡೆದ ಮಾತುಕತೆಯಲ್ಲಿ ಅವರು ಹಣವನ್ನು ಪಾವತಿಸಲು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.