ಬೆಳಗಾವಿ: ಖಾನಾಪುರ ತಾಲೂಕಿನ ಮಣಕವಾಡಿಯಲ್ಲಿ ಪತ್ತೆಯಾಗಿದ್ದ, ಡಾ.ಕಲಬುರ್ಗಿ ಹಂತಕರ ರೇಖಾಚಿತ್ರ ಹೋಲುತ್ತಿದ್ದ ವ್ಯಕ್ತಿಯ ಶವದ ನಿಗೂಢತೆ 15 ದಿನಗಳ ನಂತರ ಕೊನೆಗೂ ಬಯಲಾಗಿದೆ. ಮೃತ ವ್ಯಕ್ತಿ ಕಲಬುರ್ಗಿ ಹಂತಕನಲ್ಲ, ಬದಲಿಗೆ ಚಿಕ್ಕೋಡಿ ತಾಲೂಕಿನ ಕಾಡಾಪುರ ಗ್ರಾಮದ ರೌಡಿ ಮಹಾಂತೇಶ ಚಿದಾನಂದ ಶಿರೋಳೆ. ಹತ್ಯೆಗೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದೆ.
ಅ.18ರಂದು ಪತ್ತೆಯಾದ ಶವವನ್ನು ಅನಾಥ ಶವವೆಂದು ಪೊಲೀಸರು ತೀರ್ಮಾನಿಸಿದ್ದರು. ಆದರೆ ಮೃತನ ಮುಖ ಡಾ. ಕಲಬುರ್ಗಿ ಹಂತಕರ ರೇಖಾಚಿತ್ರ ಹೋಲುತ್ತಿದೆ ಎನ್ನುವುದು ಬೆಳಕಿಗೆ ಬಂದ ಬಳಿಕ ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿತ್ತು. ಈ ಕುರಿತು ಪರಿಶೀಲನೆ ನಡೆಸಲು ಸಿಐಡಿ ಡಿಐಜಿ ಹೇಮಂತ ನಿಂಬಾಳ್ಕರ ನೇತೃತ್ವದ ತಂಡ ಸಹ ಬೆಳಗಾವಿ, ಖಾನಾಪುರಕ್ಕೆ ಭೇಟಿ ನೀಡಿತ್ತು. ಈ ಪ್ರಕರಣದ ವಿಚಾರಣೆ ಹೊಣೆ ಹೊತ್ತಿದ್ದ ಸಿಐಡಿ ಡಿವೈಎಸ್ಪಿ ಮಹಾಂತೇಶ್ವರ ಜಿದ್ದಿ, ನಾರಾಯಣ ಭರಮನಿ ನೇತೃತ್ವದ ತಂಡ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹತ್ಯೆಗೀಡಾದ ವ್ಯಕ್ತಿಯ ಗುರುತು ಪತ್ತೆಯಾಗಿದೆ.
ಹತ್ಯೆಗೀಡಾದ ಮಹಾಂತೇಶ ರೌಡಿಯಾಗಿದ್ದು, ಈಗಾಗಲೇ ಕೊಲ್ಹಾಪುರ, ಪುಣೆ, ಚಿಕ್ಕೋಡಿ ಸೇರಿದಂತೆ ಹಲವೆಡೆ ಪ್ರಕರಣ ದಾಖಲಾಗಿದೆ.ಪುಣೆಯ ಯರವಾಡಾ ಜೈಲಿನಿಂದ ಈಚೆಗಷ್ಟೇ ಬಿಡುಗಡೆಯಾಗಿದ್ದ ಈತನನ್ನು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸಹೋದರ ಸಂಬಂಧಿಗಳೇ ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಮಹಾಂತೇಶ ಶಿರೋಳೆಯ ಸಹೋದರರಾದ ಉದಯ ಶಿರೋಳೆ, ನಂದಕುಮಾರ ಶಿರೋಳೆ ಇವರ ಸ್ನೇಹಿತ ಸವದತ್ತಿ ತಾಲೂಕು ದಾಸನಾಳ ಗ್ರಾಮದ ಮಲ್ಲಪ್ಪ ಅಲಿಯಾಸ್ ಮಲ್ಲಿಕಾರ್ಜುನ್ ಕೊಟಗಿ, ಮಂಜುನಾಥ ಹೊಸೂರ ಅವರನ್ನು ಬಂಧಿಸಲಾಗಿದೆ. ಅವರ ಬಳಿಯಿಂದ ಹತ್ಯೆಗೆ ಬಳಕೆ ಮಾಡಿದ ನಾಡ ಪಿಸ್ತೂಲ್, ಮೊಬೈಲ್, ಕಾರನ್ನು ವಶಪಡಿಸಿಕೊಂಡಿದ್ದಾರೆ.
ಮೊದಲೇ ಮಾಡಿದ ಪ್ಲಾನ್‍ನಂತೆ ಅ.17 ರಂದು ಗೋವಾಕ್ಕೆ ಎರಡು ದಿನ ಪ್ರವಾಸಕ್ಕೆಂದು ಮಹಾಂತೇಶನನ್ನು ಕರೆದುಕೊಂಡು ಇವರೆಲ್ಲ ವಾಹನವೊಂದರಲ್ಲಿ ಹೊರಟಿದ್ದಾರೆ. ಖಾನಾಪುರ ಬಸ್ ನಿಲ್ದಾಣದ ಬಳಿ ಇರುವ ಬಾರ್‍ನಲ್ಲಿ ಮದ್ಯ ಸೇವನೆ ಮಾಡಿದ ಬಳಿಕ ಗೋವಾ ಮಾರ್ಗದಲ್ಲಿ 8-10 ಕಿ.ಮೀ ದೂರ ತೆರಳಿದ್ದರು. ಅಲ್ಲಿ ಮಹಾಂತೇಶ ಮೂತ್ರ ವಿಸರ್ಜನೆಗೆಂದು ಕೆಳಗಿಳಿದಾಗ ನಾಡ ಪಿಸ್ತೂಲಿನಿಂದ ಆತನಿಗೆ ಗುಂಡು ಹೊಡೆದು ಹತ್ಯೆಗೈದಿದ್ದಾರೆ. ಎರಡು ಗುಂಡು ಮಹಾಂತೇಶನಿಗೆ ತಾಗಿದ್ದರೆ, ಇನ್ನೊಂದು ಗುಂಡು ಗುರಿ ತಪ್ಪಿದೆ. ಶವವನ್ನು ಅಲ್ಲೇ ಬಿಸಾಡಿ, ಉಳಿದವರೆಲ್ಲ ದಾಂಡೇಲಿ, ಧಾರವಾಡ ಮಾರ್ಗವಾಗಿ ತೆರಳಿ ಅ.18 ರಂದು ಯರಗಟ್ಟಿ ಬಳಿ ಮಲ್ಲಪ್ಪ ಕೊಟಗಿಯನ್ನು ಬಿಟ್ಟು ವಾಪಸ್ ಚಿಕ್ಕೋಡಿಗೆ ತೆರಳಿದ್ದಾರೆ. ಈ ಹತ್ಯೆಗಾಗಿಯೇ ಇವರು ಅಲಹಾಬಾದ ಸಮೀಪದ ತನ್ವೀರ ಎಂಬಾತನಿಂದ 30 ಸಾವಿರ ನೀಡಿ ನಾಡ ಪಿಸ್ತೂಲ್ ಖರೀದಿಸಿದ್ದಾರೆ.