ಜಿಲ್ಲಾ ಸುದ್ದಿ

ರಾಜಧಾನಿಯಲ್ಲಿ ಕನ್ನಡಕ್ಕೆ ಉಳಿಗಾಲವಿದೆಯೇ?: ಪ್ರೊ. ಜಿ ವೆಂಕಟಸುಬ್ಬಯ್ಯ ಆತಂಕ

Srinivasamurthy VN

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸುಮಾರು ಶೇ.20ರಷ್ಟು ಜನ ಮಾತ್ರ ಕನ್ನಡ ಮಾತನಾಡುವವರಿದ್ದು, ಕನ್ನಡ ಉಳಿಯುತ್ತದೆಯೋ ಇಲ್ಲವೋ ಎಂಬ ಆತಂಕ ಶುರುವಾಗಿದೆ. ಕನ್ನಡಿಗರು  ಎಚ್ಚೆತ್ತುಕೊಳ್ಳಲು ಇದು ಸಕಾಲ ಎಂದು ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಹೇಳಿದರು.

ಸಪ್ನ ಪುಸ್ತಕ ಮಳಿಗೆ ಹೊರತಂದ ನಾಡಿನ 59 ಹಿರಿಯ ಸಾಹಿತಿಗಳ ಲೇಖನ ಸಂಗ್ರಹ `ಕನ್ನಡಕ್ಕಾಗಿ ಕೈಯೆತ್ತು' ಪುಸ್ತಕ ಬಿಡುಗಡೆ ಹಾಗೂ ಸಾಹಿತಿಗಳೊಡನೆ ಸಹೃದಯರ ಸಮ್ಮಿಲನ  ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿ ವರ್ಷ 300 ಪುಸ್ತಕಗಳನ್ನು ಹೊರತರುತ್ತಿದ್ದ ರಾಜ್ಯ ಸರ್ಕಾರ 2011ರಿಂದ ಅದನ್ನು ಸ್ಥಗಿತಗೊಳಿಸಿದೆ. ಪುಸ್ತಕಗಳನ್ನು ಏಕೆ ಪ್ರಕಟಿಸುತ್ತಿಲ್ಲ ಎಂಬ  ಪ್ರಶ್ನೆಗೆ ಸರ್ಕಾರವೇ ಉತ್ತರಿಸಬೇಕು ಎಂದರು.

ಚರ್ಚೆಯಿಂದ ಇತ್ಯರ್ಥ: ಬೆಳಗಾವಿ ವಿಷಯದಲ್ಲಿ ಆಗಿಂದಾಗ್ಗೆ ಸಂಘರ್ಷಗಳು ನಡೆಯುತ್ತಲೇ ಇರುತ್ತವೆ. ಆದರೆ ರಾಜ್ಯಕ್ಕೆ ಸೇರಿದ ಬೆಳಗಾವಿಯ ನಾಲ್ಕರಷ್ಟು ಪ್ರದೇಶ ಮಹಾರಾಷ್ಟ್ರದಲ್ಲಿದೆ. ಇದರ  ಬಗ್ಗೆ ಯಾರೊಬ್ಬರು ಮಾತನಾಡುವವರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಮಹದಾಯಿ ಮೂರು ರಾಜ್ಯಗಳಿಗೆ ಸೇರಿದ ವಿಚಾರ. ಮೂರೂ ರಾಜ್ಯದ ಮುಖ್ಯಮಂತ್ರಿಗಳು ಸೇರಿ  ಚರ್ಚಿಸಿದರೆ ಸುಲಭವಾಗಿ ಬಗೆಹರಿಸಬಹುದು. ಆಯಾ ರಾಜ್ಯಗಳಲ್ಲಿ ಬೇರೆ ಬೇರೆ ಪಕ್ಷಗಳು ಅಧಿಕಾರದಲ್ಲಿರುವ ಕಾರಣ ಇದು ಸಮಸ್ಯೆಯಾಗಿದೆ ಎಂದರು.

ಮಕ್ಕಳಿಗೆ ಶಿಕ್ಷಣ ನೀಡುವ ಹಕ್ಕನ್ನು ಪೋಷಕರಿಗೆ ನೀಡಿದರೆ ಕನ್ನಡ ಭಾಷೆ, ಸಂಸ್ಕೃತಿ, ಪ್ರಾಂತ್ಯಗಳ ಗತಿ ಏನು? ಎಂದು ಆತಂಕ ವ್ಯಕ್ತಪಡಿಸಿದ ಜಿವಿ, ಆಯಾ ಪ್ರಾದೇಶಿಕ ಭಾಷೆಗಳ ಉಳಿವಿಗಾಗಿ  ಎಲ್ಲ ರಾಜ್ಯದ ಮುಖ್ಯಮಂತ್ರಿಗಳು ಸೇರಿ ಕೇಂದ್ರದ ಬಳಿ ನಿಯೋಗ ಹೋಗಬೇಕು. ತಂದೆ ತಾಯಿಗಳಿಗೂ ಮಾತೃಭಾಷೆ ಬಗ್ಗೆ ತಿಳಿವಳಿಕೆ ಮೂಡಿಸಬೇಕು ಎಂದರು.

ಕನ್ನಡ ಭಾಷೆ ಕುರಿತು ನಡೆದ ಸಂವಾದದಲ್ಲಿ ಸಾಹಿತಿಗಳಾದ ಪ್ರೊ.ಕೆ.ಎಸ್.ನಿಸಾರ್ ಅಹ್ಮದ್, ಕೆ.ಮರುಳಸಿದ್ಧಪ್ಪ, ಕುಂ.ವೀಭದ್ರಪ್ಪ, ಎಚ್.ಎಸ್. ವೆಂಕಟೇಶಮೂರ್ತಿ, ಡಾ. ಕಮಲಾ ಹಂಪನಾ  ಸೇರಿದಂತೆ ಅನೇಕ ಸಾಹಿತಿಗಳು ಪಾಲ್ಗೊಂಡಿದ್ದರು.

SCROLL FOR NEXT