ಬೆಂಗಳೂರು: ಉದ್ದಿಮೆದಾರರು ಹಾಗೂ ವರ್ತಕರು ಪರವಾನಗಿ ಪಡೆಯದೆ ಬೇಳೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬೇಳೆ ದಾಸ್ತಾನು ವಶಪಡಿಸಿಕೊಳ್ಳುವ ಸರ್ಕಾರದ ಕ್ರಮ ವಿರೋಧಿಸಿ ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆಗಳು ನ.6ರಿಂದ ವಹಿವಾಟು ಸ್ಥಗಿತಗೊಳಿಸಲಿವೆ.
ಎಲ್ಲ ವರ್ತಕರು ಮತ್ತು ಉದ್ದಿಮೆದಾರರಿಗೆ ಕೂಡಲೇ ಪರವಾನಗಿ ನೀಡಬೇಕು ಮತ್ತು ಪರವಾನಗಿ ನೀಡುವವರೆಗೆ ಸಲ್ಲಿಸಿರುವ ಅರ್ಜಿಯನ್ನೇ ಪುರಿಷ್ಕರಿಸಿ ದಾಳಿ ನಿಲ್ಲಿಸಬೇಕು ಎಂದು ಸರ್ಕಾರಕ್ಕೆ ತಿಳಿಸಿದ್ದರೂ ದಾಳಿಯನ್ನು ಮುಂದುವರಿಸಿದೆ.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಮನವಿಗೆ ಸ್ಪಂದಿಸದ ಕಾರಣ ಅನ್ಯ ಮಾರ್ಗವಿಲ್ಲದೆ ವಹಿವಾಟು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಎಫ್ಕೆಸಿಸಿ ಹಿರಿಯ ಉಪಾಧ್ಯಕ್ಷ ಎಂ.ಸಿ. ದಿನೇಶ್ ತಿಳಿಸಿದ್ದಾರೆ.