ಬೆಂಗಳೂರು: ಪ್ರತಿಷ್ಠಿತ ಕಂಪನಿಗಳ ನಕಲಿ ಸಿದ್ಧ ಉಡುಪುಗಳನ್ನು ದಾಸ್ತಾನು ಮಾಡಿಕೊಂಡು ಮಾರಾಟ ಮಾಡುತ್ತಿದ್ದ ನೇಪಾಳದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ರೂ, 1.8 ಕೋಟಿ ಮೌಲ್ಯದ ನಕಲಿ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ. ಶಾಂತಿನಗರಗ ಶ್ರೀ ಜಗದ್ಗುರು ಉದಾಶಿನ್ ರಸ್ತೆಯಲ್ಲಿರುವ ಪಿ.ಎಸ್.ಶೆಲ್ಟರ್ ಅಪಾರ್ಟ್ ಮೆಂಟ್ ನಿವಾಸಿ ಲಕ್ಷ್ಮಣ್ (26) ಬಂಧಿತ. ಜೀನ್ಸ್ ಪ್ಯಾಂಟ್, ಶರ್ಟ್, ಟೀ ಶರ್ಟ್ ಗಳಿಗೆ ಪ್ರತಿಷ್ಠಿತ ಕಂಪನಿಗಳ ಸ್ಟಿಕ್ಕರ್ ಗಳನ್ನು ಅಂಟಿಸಿ ಅಸಲಿ ಉತ್ಪನ್ನಗಳೆನ್ನುವಂತೆ ಬಿಂಬಿಸಿ ಮಾರುತ್ತಿದ್ದರು.
ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು, ಆರೋಪಿಯ ಗೋದಾಮಿನ ಮೇಲೆ ದಾಳಿ ನಡೆಸಿ, ರೂ. 1.8 ಕೋಟಿ ಮೌಲ್ಯದ ವಿವಿಧ ಕಂಪನಿಗಳ 6,177 ಬಟ್ಟೆಗಳನ್ನು ಜಪ್ತಿ ಮಾಡಿದ್ದಾರೆ. ತಲೆಮರೆಸಿಕೊಂಡಿರುವ ಮಾಲೀಕ ಸಂಜಯ್ ಬತೀಜಾ ಹಾಗೂ ಬಂಧಿತ ಲಕ್ಷ್ಮಣ್ ಕಳೆದ ನಾಲ್ಕು ವರ್ಷಗಳಿಂದ ಈ ದಂಧೆಯಲ್ಲಿ ತೊಡಗಿದ್ದರು. ನಕಲಿ ಸಿದ್ಧ ಉಡುಪುಗಳನ್ನು ಲೂದಿಯಾನದಿಂದ ತರಿಸಿಕೊಂಡು ಅಸಲಿ ಕಂಪನಿಗಳ ದರಕ್ಕೆ ಮಾರಾಟ ಮಾಡುತ್ತಿದ್ದರು ಎಂದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.