ಸಂಗ್ರಹ ಚಿತ್ರ 
ಜಿಲ್ಲಾ ಸುದ್ದಿ

ಡಿಕ್ಕಿ ಹೊಡೆಸಿ ಡಿಕ್ಕೀಲಿ ಟೆಕ್ಕಿ ಇಟ್ಟು ಸಿಕ್ಬಿದ್ರು

ಟೆಕ್ಕಿಯೊಬ್ಬರನ್ನು ಅವರ ಕಾರಿನಲ್ಲೇ ಅಪಹರಿಸಿ ದ್ದಲ್ಲದೆ, ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಸತತ ಎರಡು ದಿನಗಳ ಕಾಲ ಊರೂರು...

ಬೆಂಗಳೂರು: ಟೆಕ್ಕಿಯೊಬ್ಬರನ್ನು ಅವರ ಕಾರಿನಲ್ಲೇ ಅಪಹರಿಸಿ ದ್ದಲ್ಲದೆ, ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಸತತ ಎರಡು ದಿನಗಳ ಕಾಲ ಊರೂರು ಸುತ್ತಾಡಿಸುತ್ತಿದ್ದ ನಾಲ್ವರು ಅಪಹರಣಕಾರರು ಈಗ ಪೊಲೀಸ್ ಬಲೆಗೆ ಬಿದ್ದಿದ್ದಾರೆ. 
ಟೆಕ್ಕಿಯ ಕಾರಿಗೆ ತಾವೇ ಬೈಕ್ ಡಿಕ್ಕಿ ಹೊಡೆಸಿ, ಅಪಘಾತ ಎಸಗಿದ್ದಕ್ಕೆ ಹಣ ನೀಡುವಂತೆ ಜಗಳ ತೆಗೆದು, ನಂತರ ಅದೇ ಕಾರಲ್ಲೇ ಟೆಕ್ಕಿಯನ್ನು ಅಪಹರಿಸಿ ರು.20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಈ ಚಾಲಾಕಿ ಗಳನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದಾರೆ.
ಅಲ್ಲದೆ, ಸಾಫ್ಟ್  ವೇರ್ ಎಂಜಿನಿಯರ್‍ನನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದಾರೆ ಪೊಲೀಸರು. ಗಾರೆಬಾವಿಪಾಳ್ಯ ನಿವಾಸಿ ಮೋಹನ್ (31), ಈಜಿಪುರದ ಕವಿತನ್ (29), ಕೋರಮಂಗಲದ ಸೆಂದಿಲ್ ಕುಮಾರ್ (26) ಹಾಗೂ ತಮಿಳುನಾಡು ವೆಲ್ಲೂರಿನ ಶಂಕರ್(35) ಬಂಧಿತರು. 
ಅಪಹರಣಕ್ಕೊಳಗಾದ ಉತ್ತರ ಭಾರತ ಮೂಲದ ಎಂಜಿನಿಯರ್ ಸರ್ಜಾಪುರ ನಿವಾಸಿಯಾಗಿದ್ದು, ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಸಾಫ್ಟ್  ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆರೋಪಿಗಳು ಟೈಲರಿಂಗ್, ಸಣ್ಣ ಗಾರ್ಮೆಂಟ್ಸ್ ನಡೆಸುತ್ತಿದ್ದು, ಆರ್ಥಿಕ ನಷ್ಟ ಉಂಟಾಗಿದ್ದರಿಂದ ಈ ಕೃತ್ಯ ಎಸಗಿದ್ದಾಗಿ ಪೊಲೀಸರ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ.
ಅಲ್ಲದೆ, ಬಂಧಿತರಿಂದ ರು.1.20 ಲಕ್ಷ ನಗದು, ಐ20 ಕಾರ್, ಮೊಬೈಲ್ ಫೋನ್ ಗಳು, ವಾಚ್ ಮತ್ತು ಕೃತ್ಯಕ್ಕೆ ಬಳಸಿದ್ದ ನಕಲಿ ರಿವಾಲ್ವಾರ್‍ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಗ್ನೇಯ ವಿಭಾಗ ಡಿಸಿಪಿ ರೋಹಿಣಿ ಕಟೋಚ್ ತಿಳಿಸಿದರು. 
ಹೇಗಾಯಿತು ಘಟನೆ?: ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅನುರಾಗ್ (ಹೆಸರು ಬದಲಿಸಲಾಗಿದೆ) ಕಳೆದ 10 ವರ್ಷಗಳಿಂದ ಎಚ್‍ಎಸ್‍ಆರ್ ಲೇಔಟ್‍ನಲ್ಲಿ ಪತ್ನಿ ಜತೆ ವಾಸವಿದ್ದರು.  ನಿತ್ಯ ಬೆಳಗ್ಗೆ 10.30ಕ್ಕೆ ಕಚೇರಿಗೆ ತೆರಳಿದರೆ ರಾತ್ರಿ 9.30ಕ್ಕೆ ವಾಪಸಾಗುತ್ತಿದ್ದರು. ಆದರೆ, ಬುಧವಾರ ರಾತ್ರಿ ಎಲೆಕ್ಟ್ರಾನಿಕ್ ಸಿಟಿಯಿಂದ ಕಾರಿನಲ್ಲಿ ಮನೆಗೆ ಮರಳುತ್ತಿದ್ದರು. ಆಗ ಇವರ ಕಾರನ್ನು ಇಬ್ಬರು ಆರೋಪಿಗಳು ಕಾರಿನಲ್ಲಿ ಹಿಂಬಾಲಿಸಿದ್ದಾರೆ. ನಂತರ ಕಸುವನಹಳ್ಳಿ ರಸ್ತೆ ಮಾತಾ ಅಮೃತಾನಂದಮಯಿ ಆಶ್ರಮದ ಬಳಿ ಇರುವ ರಸ್ತೆ ಹಂಪ್ಸ್‍ನಲ್ಲಿ ಕಾರಿಗೆ ತಾವೇ ಬೈಕ್ ಡಿಕ್ಕಿ ಹೊಡೆಸಿದ್ದಾರೆ. ನಂತರ ಅಪಘಾತವೆಸಗಿದ್ದಕ್ಕೆ ಹಣ ನೀಡುವಂತೆ ಬೆದರಿಸಿದ್ದಾರೆ. 
ಆಗ ಇದೇ ವೇಳೆ ಅಲ್ಲಿಯೇ ಕಾಯುತ್ತಾ ನಿಂತಿದ್ದ ಉಳಿದ ಮೂವರು ಕೂಡ ಅವರೊಂದಿಗೆ ಸೇರಿ ಅನುರಾಗ್‍ನನ್ನು ಅವರ ಕಾರಿನಲ್ಲೇ ಅಪಹರಿಸಿದ್ದಾರೆ. ನಂತರ ಅಲ್ಲಿಂದ ವಾಹನವನ್ನು ಅತ್ತಿತ್ತ ಸುತ್ತಾಡಿಸುತ್ತಾ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಅವರ ಮೊಬೈಲ್ ಫೋನ್‍ನಿಂದಲೇ ಪತ್ನಿಗೆ ಕರೆ ಮಾಡಿ, ನಿಮ್ಮ ಪತಿ ಅನುರಾಗ್ ಕಾರು ಅಪಘಾತ ಮಾಡಿದ್ದಾರೆ. ಗಾಯಾಳುವಿಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆಗೆ ರು.1 ಲಕ್ಷ ನೀಡುವಂತೆ ಕೇಳಿದ್ದಾರೆ. ಇದರಿಂದ ಕೊಂಚ ಗಾಬರಿಯಾದ ಪತ್ನಿ, ಹಣ ಹೊಂದಿಸಿ ಎಲ್ಲಿಗೆ ಬರಬೇಕು ಎಂದು ಕೇಳಿದ್ದಾರೆ. 
ಆಗ ಆರೋಪಿಗಳು ರಾತ್ರಿ 11.30ರ ಸುಮಾರಿಗೆ ಸರ್ಜಾಪುರ ರಸ್ತೆ ಬಾಟಾ ಶೋರೂಮ್ ಬಳಿ ಬನ್ನಿ ಎಂದಿದ್ದಾರೆ. ಇದು ಸತ್ಯವೆಂದು ನಂಬಿ ಅನುರಾಗ್ ಪತ್ನಿ ಹಣ ಹಿಡಿದುಕೊಂಡು ಬಂದಿದ್ದಾರೆ. ಬೈಕ್ ನಲ್ಲೇ ಬಂದ ಆರೋಪಿಗಳು, ಆಕೆಯಿಂದ ರು.90 ಸಾವಿರ ಕಿತ್ತುಕೊಂಡು ಪರಾರಿಯಾಗಿದ್ದಾರೆ. 
ಅದಕ್ಕೂ ಮೊದಲೇ ಅನುರಾಗ್‍ರಿಂದ ಆರೋಪಿಗಳು ರು.30 ಸಾವಿರ ಕಿತ್ತುಕೊಂಡಿದ್ದರು. ಮರುದಿನ (ನ.5ರಂದು) ಬೆಳಗ್ಗೆ ಮತ್ತೆ ಅನುರಾಗ್ ಪತ್ನಿಗೆ ಕರೆ ಮಾಡಿದ ಆರೋಪಿಗಳು, ಅಪಘಾತ ಉಂಟಾಗಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ. ಅದಕ್ಕೆ ಅನುರಾಗ್ ಕಾರಣನಾಗಿದ್ದು ಅದನ್ನು ಸೆಟ್ಲ್ ಮಾಡಲು ರು.20 ಲಕ್ಷ ನೀಡಬೇಕು. ಇಲ್ಲದಿದ್ದರೆ, ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ತೋಚದಂತಾದ ಅನುರಾಗ್ ಪತ್ನಿ, ಎಚ್‍ಎಸ್‍ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 
ಇತ್ತ ಅನುರಾಗ್ ಅವರನ್ನು ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಕೃಷ್ಣಗಿರಿ, ಹೊಸೂರು, ಆನೇಕಲ್ ಹೀಗೆ ಎರಡು ದಿನಗಳ ಕಾಲ ನಿರಂತರವಾಗಿ ಸುತ್ತಾಡಿಸಿದ್ದಾರೆ. ನಿರ್ಜನ ಪ್ರದೇಶಗಳಲ್ಲಿ ವಾಹನ ನಿಲ್ಲಿಸಿ, ಅನುರಾಗ್ ಅವರಿಗೆ ತಿಂಡಿ ನೀಡುವುದು, ನಿಸರ್ಗ ಕರೆಗಳನ್ನು ಮಾಡಿಸುತ್ತಿದ್ದರು. ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಅನುರಾಗ್‍ಗೆ ಪಿಸ್ತೂಲ್ ಹಾಗೂ ಲಾಂಗ್‍ನಿಂದ ಬೆದರಿಸುತ್ತಿದ್ದರು. 
ಹೇಗೆ ಸಿಕ್ಕಿಬಿದ್ದರು?: ಪ್ರಕರಣ ದಾಖಲಾಗುತ್ತಿದ್ದಂತೆ ಓರ್ವ ಎಸಿಪಿ, 8 ಇನ್ಸ್‍ಪೆಕ್ಟರ್‍ಗಳು, 5 ಪಿಎಸ್‍ಐ ಸೇರಿದಂತೆ ಒಟ್ಟು 100 ಸಿಬ್ಬಂದಿಯ ಐದು ವಿಶೇಷ ತಂಡ ರಚಿಸಲಾಗಿತ್ತು. ಆರೋಪಿಗಳು ಅನುರಾಗ್ ಪತ್ನಿಗೆ ಕರೆ ಮಾಡಿ, ರು.20 ಲಕ್ಷ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ. 
ಹೀಗಾಗಿ, ಪೊಲೀಸರ ಸೂಚನೆಯಂತೆ ಆಕೆ, ರು.20 ಲಕ್ಷ ಕೊಡುವುದಾಗಿ ಹೇಳಿದ್ದಾಳೆ. ಅದಕ್ಕಾಗಿ ಪೇಪರ್ ಬಂಡಲ್‍ಗಳ ಮೇಲೆ ರು.1000 ಮುಖಬೆಲೆಯ ನೋಟುಗಳನ್ನು ಇಟ್ಟು ರು.20 ಲಕ್ಷ ಸಿದ್ದಪಡಿಸಿಕೊಂಡಿದ್ದಳು. ನಂತರ ಹಣವನ್ನು ಎಲ್ಲಿಗೆ ತರಬೇಕು ಎಂದು ಕೇಳಿದಾಗ, ಆರೋಪಿಗಳು ತಮಿಳುನಾಡು ಸೇರಿದಂತೆ ಹೊರವಲಯದ ಇತರೆ ಪ್ರದೇಶಗಳ ಹೆಸರನ್ನು ಹೇಳುತ್ತಿದ್ದರು. ಅಂತಿಮವಾಗಿ ಪರಪ್ಪನ ಅಗ್ರಹಾರ ಸಮೀಪದ ಹೊಸ ರಸ್ತೆ ಬಾಷ್ ಕಂಪನಿಯ ಬಳಿ ಬರಲು ಹೇಳಿದ್ದರು. 
ಅದರಂತೆ ಅನುರಾಗ್ ಪತ್ನಿ ಹಾಗೂ ಆತನ ಸ್ನೇಹಿತ, ಬಾಷ್ ಕಂಪನಿ ಬಳಿ ಹಣವಿದ್ದ ಬ್ಯಾಗ್ ಇಟ್ಟುಕೊಂಡು ನಿಂತಿದ್ದರು. ಬೆಳಗ್ಗೆ 10 ಗಂಟೆ ಸುಮಾರಿಗೆ ಬೈಕ್‍ನಲ್ಲಿ ಆಗಮಿಸಿದ ಇಬ್ಬರು ಆರೋಪಿಗಳು, ಬ್ಯಾಗ್ ಕಿತ್ತುಕೊಂಡು ಪರಾರಿಯಾಗುತ್ತಿದ್ದರು. ಆದರೆ, ಅದಕ್ಕೂ ಮೊದಲೇ ಮಫ್ತಿಯಲ್ಲಿ ಸನ್ನದ್ಧರಾಗಿದ್ದ ಪೊಲೀಸರ ತಂಡ ಆರೋಪಿಗಳಿಬ್ಬರನ್ನು ಬೆನ್ನಟ್ಟಿ ಹಿಡಿದು ಬಂಧಿಸಿದ್ದಾರೆ. ಬಳಿಕ ಅನುರಾಗ್ ಎಲ್ಲಿ ಎಂದು ಕೇಳಿದಾಗ, ಕೂಡ್ಲು ಗೇಟ್‍ನಿಂದ ಮುಂದಕ್ಕೆ ಕರೆದೊಯ್ದರು. ಅಲ್ಲಿ ರಸ್ತೆ ಬದಿ ಕಾರು ನಿಲ್ಲಿಸಿಕೊಂಡು ನಿಂತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ಕಾರಿನ ಡಿಕ್ಕಿಯಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿದ್ದ ಅನುರಾಗ್ ರನ್ನು ರಕ್ಷಿಸಿದ್ದಾರೆ. 
ಮತ್ತೊಬ್ಬ ಆರೋಪಿ ಬೊಮ್ಮನಹಳ್ಳಿ ನಿವಾಸಿ ಫೈರೋಜ್ ಅಲಿಯಾಸ್ ಬಾಬು ತಲೆಮರೆಸಿಕೊಂಡಿದ್ದು ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಅವರು ಈ ಹಿಂದೆ ಭಾಗಿಯಾಗಿರುವ ಪ್ರಕರಣಗಳ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ಸತ್ತವರಿಂದಲೂ ವೋಟಿಂಗ್, SIR ಉಪಯೋಗಗಳ ಕುರಿತು ಚೆನ್ನಿತ್ತಲಾರನ್ನು ಕೇಳಿ': ರಾಹುಲ್ ಗಾಂಧಿಗೆ ಸುರೇಶ್ ಗೋಪಿ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ