ಜಿಲ್ಲಾ ಸುದ್ದಿ

ಈಗಿನದು ಕನ್ನಡ ಸರ್ಕಾರವಲ್ಲ, ಕನ್ನಡಿಗರ ಹೋರಾಟ ಅನಿವಾರ್ಯ: ಸಾಹಿತಿ ಚಂಪಾ

Mainashree
ಬೆಂಗಳೂರು: ಈಗಿನದು ಕರ್ನಾಟಕ ಸರ್ಕಾರವಾಗಿದೆಯೇ ವಿನಃ ಕನ್ನಡ ಸರ್ಕಾರವಾಗಿಲ್ಲ. ಕನ್ನಡ ಸರ್ಕಾರದ ಸ್ಥಾಪನೆಗೆ ಕನ್ನಡಿಗರ ಹೋರಾಟ ಅನಿವಾರ್ಯವಾಗಿದೆ ಎಂದು ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಅಭಿಪ್ರಾಯಪಟ್ಟರು. 
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೌಕರರ ಸಂಘವು ಮಲ್ಲೇಶ್ವರಂನ ಜಲಮಂಡಳಿ ರಜತ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ 60ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ತಮಿಳುನಾಡಿನಲ್ಲಿರುವುದು ತಮಿಳು ಸರ್ಕಾರ, ಕೇರಳದಲ್ಲಿರುವುದು ಮಲೆಯಾಳಂ ಸರ್ಕಾರ. ನಮ್ಮ ರಾಜ್ಯದಲ್ಲಿರುವ ಕರ್ನಾಟಕ ಸರ್ಕಾರ. ಈ ರಾಜ್ಯದಲ್ಲಿ ಕನ್ನಡ ಸರ್ಕಾರ ಸ್ಥಾಪನೆಯಾಗಬೇಕಿದ್ದರೆ ಅದು ವಾಟಾಳ್ ನಾಗರಾಜ್ ಅಂತವರಿಂದ ಮಾತ್ರ ಸಾಧ್ಯ. ಆ ಸರ್ಕಾರದ ಮುಖ್ಯಮಂತ್ರಿಯಾಗಿ ವಾಟಾಳ್ ಕಂಗೊಳಿಸಲಿದ್ದಾರೆ ಎಂದರು. 
ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಮಾತನಾಡಿ, ನೆರೆ ರಾಜ್ಯಗಳ ಎಲ್ಲ ಚಿತ್ರಮಂದಿರಗಳಲ್ಲಿ ಮುಂದಿನ ಮೂರು ತಿಂಗಳು ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸಲು ಸಿದ್ದರಾಮಯ್ಯ ಸರ್ಕಾರ ಪತ್ರ ಬರೆಯಬೇಕು. ಇಲ್ಲದಿದ್ದರೆ ನಮ್ಮ ರಾಜ್ಯದಲ್ಲಿ ಪ್ರದರ್ಶನಗೊಳ್ಳುವ ಪರಾಭಾಷಾ ಚಿತ್ರಗಳಿಗೆ ಅಡ್ಡಿಯನ್ನುಂಟು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. 
ಅತಿ ಹೆಚ್ಚು ಕನ್ನಡಿಗರಿಗೆ ಕೆಲಸ ಕೊಟ್ಟಿರುವ ಬೆಂಗಳೂರು ಜಲ ಮಂಡಳಿಗೆ ಅಭಿನಂದಿಸುತ್ತೇನೆ. ಹಾಗೆಯೇ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಕುಡಿಯುವ ನೀರನ್ನು ಉಚಿತವಾಗಿ ನೀಡಲು ಜಲ ಮಂಡಳಿ ಅಧ್ಯಕ್ಷರು ಮುಂದಾಗಬೇಕು ಎಂದು ಒತ್ತಾಯಿಸಿದರು. ಜಲ ಮಂಡಳಿ ಅಧ್ಯಕ್ಷ ಟಿ.ಎಂ. ವಿಜಯï ಭಾಸ್ಕರ್ ಮಾತನಾಡಿ, ಸಮರ್ಪಕ ನೀರು ಸರಬಾರಾಜು ನಮ್ಮ ಮುಖ್ಯ ಗುರಿಯಾಗಿದ್ದು, ಕಳೆದ ಸಾಲಿನಲ್ಲಿ ಸೋರಿಕೆಯ ಪ್ರಮಾಣವನ್ನು ತಡೆಗಟ್ಟುವ ಮೂಲಕ ಬಹಳಷ್ಟು ಉಳಿತಾಯ ಮಾಡಿದ್ದೇವೆ. 
ಮುಂಬರುವ ದಿನಗಳಲ್ಲಿ ಇನ್ನೂ ಸೂಕ್ತ ತಂತ್ರಜ್ಞಾನ ಅಳವಡಿಸಿಕೊಂಡು ಇನ್ನಷ್ಟು ಉಳಿತಾಯ ಮಾಡಲಾಗುವುದು ಎಂದರು. ಇದೇ ವೇಳೆ ಕನ್ನಡ ಹೋರಾಟಗಾರರಾದ ಕನ್ನಡ ಕೃಷ್ಣ, ಎಚ್.ವಿ. ಗಿರೀಶ್‍ಗೌಡ, ನಿವೃತ್ತ ಮುಖ್ಯ ಎಂಜಿನಿಯರ್ ಕೆ. ರಮೇಶ್ ಅವರನ್ನು ಅಭಿನಂದಿಸಲಾಯಿತು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಜಲ ಮಂಡಳಿ ಅಧ್ಯಕ್ಷ ಟಿ.ಎಂ. ವಿಜಯ್ ಭಾಸ್ಕರ್, ಮುಖ್ಯ ಎಂಜಿನಿಯರ್ ಎಸ್. ಕೃಷ್ಣಪ್ಪ, ಕನ್ನಡ ಹೋರಾಟಗಾರ ಸಾ.ರಾ. ಗೋವಿಂದು, ಹಿರಿಯ ನಟ ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.
SCROLL FOR NEXT