ಬೆಂಗಳೂರು: ಫೇಸ್ ಬುಕ್ ನಲ್ಲಿ ತಮಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಮೈಸೂರು- ಕೊಡಗು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ದೂರು ನೀಡಿದ್ದಾರೆ.
ಟಿಪ್ಪು ಜಯಂತಿ ವಿಷಯದಲ್ಲಿ ತಮಗೆ ಬೆದರಿಕೆ ಹಾಕಲಾಗಿದೆ ಎಂದು ಪ್ರತಾಪ್ ಸಿಂಹ ಮೈಸೂರು ಆಯುಕ್ತ ಬಿ ದಯಾನಂದ್ ಅವರಿಗೆ ದೂರು ನೀಡಿದ್ದಾರೆ. ಟಿಪ್ಪು ಜಯಂತಿ ವಿರುದ್ಧ ಮಡಿಕೇರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ವಿಶ್ವಹಿಂದು ಪರಿಷತ್ ನ ಮುಖಂಡ ಕುಟ್ಟಪ್ಪ ಮೃತಪಟ್ಟಿದ್ದರು. ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಪ್ರತಾಪ್ ಸಿಂಹ, ಕುಟ್ಟಪ್ಪ ಮೇಲಿಂದ ಬಿದ್ದು ಮೃತಪಟ್ಟಿದ್ದಾರೆ ಎಂದು ರಾಜ್ಯ ಸರ್ಕಾರ ಹೇಳಿದೆ. ಆದರೆ ಕುಟ್ಟಪ್ಪ ಮೇಲಿಂದ ಬಿದ್ದು ಸತ್ತಿಲ್ಲ. ಸರ್ಕಾರ ಘಟನೆಯನ್ನು ತಿರುಚುವ ಪ್ರಯತ್ನ ಮಾಡಿದೆ ಎಂದು ಆರೋಪಿಸಿದ್ದರು. ಸಂಸದರ ಹೇಳಿಕೆಗೆ ಫೇಸ್ ಬುಕ್ ಪೇಜ್ ಒಂದರಲ್ಲಿ ಪ್ರತಿಕ್ರಿಯೆ ಬಂದಿದ್ದು, ಮೃತಪಟ್ಟ ಕುಟ್ಟಪ್ಪ ಅವರೊಂದಿಗೆ ಪ್ರತಾಪ್ ಸಿಂಹ ಅವರ ಫೋಟೊ ಹಾಕಿ 'ಕುಟ್ಟಪ್ಪ ಅವರಂತೆಯೇ ನಿನಗೂ ಸಾವು ಬರುತ್ತದೆ ಎಂದು ಬೆದರಿಕೆ ಹಾಕಲಾಗಿದೆ' ಎಂದು ಆಯುಕ್ತ ಬಿ ದಯಾನಂದ್ ಗೆ ನೀಡಿರುವ ದೂರಿನಲ್ಲಿ ಪ್ರತಾಪ್ ಸಿಂಹ ಹೇಳಿದ್ದಾರೆ.
ನ.10 ರಂದು ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಕೊಡಗು ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕುಟ್ಟಪ್ಪ ಎಂಬ ವ್ಯಕ್ತಿ ಮೃತಪಟ್ಟಿದ್ದರು.