ನಕಲಿ ಐಟಿ ಇನ್ಸ್ ಪೆಕ್ಟರ್ ಬಂಧನ
ಆದಾಯ ತೆರಿಗೆ ಇನ್ಸ್ ಪೆಕ್ಟರ್ ಎಂದು ಪರಿಚಯಿಸಿಕೊಂಡು ಚಾಲಕನನ್ನು ಯಮಾರಿಸಿ ಐ-ಕ್ಯಾಬ್ ಕಂಪನಿಯ ಟೊಯೋಟ ಇಟಿಯೋಸ್ ಕಾರ್ ಕಳವು ಮಾಡಿದ್ದ ಚಾಲಾಕಿ ಕಳ್ಳನನ್ನು ಬಂಧಿಸಲಾಗಿದೆ.
ಬೆಂಗಳೂರು: ಆದಾಯ ತೆರಿಗೆ ಇನ್ಸ್ ಪೆಕ್ಟರ್ ಎಂದು ಪರಿಚಯಿಸಿಕೊಂಡು ಚಾಲಕನನ್ನು ಯಮಾರಿಸಿ ಐ-ಕ್ಯಾಬ್ ಕಂಪನಿಯ ಟೊಯೋಟ ಇಟಿಯೋಸ್ ಕಾರ್ ಕಳವು ಮಾಡಿದ್ದ ಚಾಲಾಕಿ ಕಳ್ಳನನ್ನು ಬಂಧಿಸಿರುವ ಗಿರಿನಗರ ಪೊಲೀಸರು ಆತನಿಂದ ರೂ 5 ಲಕ್ಷ ಮೌಲ್ಯದ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಬನಶಂಕರಿ 3ನೇ ಹಂತದ ನಿವಾಸಿ ದೀಪಕ್ಕುಮಾರ್ ಅಲಿಯಾಸ್ ರಾಜಕುಮಾರ್ (32) ಬಂಧಿತ ಆರೋಪಿ. ನ.3ರಂದು ಜಸ್ಟ್ ಡಯಲ್ಗೆ ಕರೆ ಮಾಡಿದ್ದ ಈತ, ತನ್ನನ್ನು ಇನ್ಕಂ ಟ್ಯಾಕ್ಸ್ ಇನ್ಸ್ಪೆಕ್ಟರ್ ಎಂದು ಪರಿಚಯಿಸಿಕೊಂಡಿದ್ದಾನೆ. ದೇವನಹಳ್ಳಿಗೆ ವಿಮಾನ ನಿಲ್ದಾಣಕ್ಕೆ ತೆರಳಬೇಕಿದ್ದು ಬಾಡಿಗೆಗೆ ಟ್ಯಾಕ್ಸಿ ಬೇಕಾಗಿದೆ. ಕೂಡಲೇ ಪುಟ್ಟೇನಹಳ್ಳಿ ಬಿಗ್ಬಜಾರ್ ಬಳಿ ಕಾರು ಕಳುಹಿಸುವಂತೆ ಕೇಳಿದ್ದಾನೆ. ಅದರಂತೆ ಐ-ಕ್ಯಾಬ್ ಕಂಪನಿಯು ಈತ ತಿಳಿಸಿದ್ದ ಜಾಗಕ್ಕೆ ಟೊಯೋಟ ಇಟಿಯೋಸ್ ಕಾರು ಕಳುಹಿಸಿದೆ ಕಾರಿನಲ್ಲಿ ಕುಳಿತ ಆರೋಪಿ ನಾನು ಇನ್ಕಂ ಟ್ಯಾಕ್ಸ್ ಅಧಿಕಾರಿ, ನಾನು ಮತ್ತು ನನ್ನ ಸ್ನೇಹಿತ ಇಂದು ಹೈದರಾಬಾದಿಗೆ ಹೋಗುತ್ತಿದ್ದೇವೆ. ಹಾಗಾಗಿ ಆತನನ್ನು ವುಡ್ಲ್ಯಾಂಡ್ ಹೋಟೆಲ್ ಬಳಿ ಪಿಕ್ಅಪ್ ಮಾಡಬೇಕು ಎಂದು ಮೆಜೆಸ್ಟಿಕ್, ರಿಚ್ಮಂಡ್ ಸರ್ಕಲ್ ಸೇರಿದಂತೆ ನಗರದ ಇತರೆಡೆ ಸುತ್ತಾಡಿಸಿದ್ದಾನೆ. ಬಳಿಕ ಹೈದರಾಬಾದ್ಗೆ ಹೋಗುವುದು ರದ್ದಾಗಿದೆ ಎಂದು ಹೇಳಿ, ಪುಟ್ಟೇನಹಳ್ಳಿ ಹಾಗೂ ಸುತ್ತಲ ಸ್ಥಳಗಳಲ್ಲಿ ಸುತ್ತಾಡಿಸಿದ್ದಾನೆ. ನಂತರ, ರಾತ್ರಿ 10.45ರ ವೇಳೆಗೆ ಹೊಸಕೆರೆ ಹಳ್ಳಿ ರಿಂಗ್ ರಸ್ತೆ ಸಮೀಪವಿರುವ ತನ್ನ ತಂಗಿ ಮನೆಗೆ ತೆರಳಬೇಕೆಂದು ಹೇಳಿರಿಂಗ್ ರಸ್ತೆಯಲ್ಲಿರುವ ಎಸ್ಎಲ್ಎನ್ ಬಾರ್ ಬಳಿ ಕಾರು ನಿಲ್ಲಿಸುವಂತೆ ಸೂಚಿಸಿದ್ದಾನೆ. ಈ ವೇಳೆ ಸಿಗರೇಟ್ ತರುವಂತೆ ಚಾಲಕನಿಗೆ ಹೇಳಿದ್ದಾನೆ.
ಕಾರು ಚಾಲಕ ಸಿಗರೇಟ್ ತರುವುದಕ್ಕೆ ಅತ್ತ ಹೋಗುತ್ತಿದ್ದಂತೆ ಆರೋಪಿ ಕಾರಿನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದ. ಈ ಸಂಬಂಧ ಕಾರಿನ ಮಾಲೀಕ ಪುಟ್ಟಸ್ವಾಮಿ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಾರ್ಯಾಚರಣೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.