ಬೆಂಗಳೂರು: ಮಕ್ಕಳ ದಿನಾಚರಣೆಯಂದೇ ಮಕ್ಕಳಿಗೆ ರಾಜ್ಯ ಸರ್ಕಾರ ಉಚಿತ ಶೂ ಕೊಡುಗೆ ನೀಡಿದೆ. ಕ್ಷೀರಭಾಗ್ಯ, ಅಕ್ಷರ ದಾಸೋಹ, ಸೈಕಲ್ ಭಾಗ್ಯಗಳ ಸಾಲಿಗೆ ಇದೀಗ ಶೂ ಭಾಗ್ಯ ಸೇರ್ಪಡೆಯಾಗಿದೆ. ಪ್ರಸಕ್ತ ಸಾಲಿನಿಂದಲೇ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಶೂಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
ರಾಜ್ಯ ಮಕ್ಕಳ ಆಯೋಗ ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ ಕಬ್ಬನ್ ಪಾರ್ಕ್‌ನಲ್ಲಿ ಆಯೋಜಿಸಿರುವ 2 ದಿನಗಳ ಮಕ್ಕಳ ಹಬ್ಬಕ್ಕೆ ಚಾಲನೆ ದೊರೆತಿದೆ. ಕಬ್ಬನ್ ಪಾರ್ಕ್‌ನ ಬ್ಯಾಂಡ್ ಸ್ಟ್ಯಾಂಡ್‌ನಲ್ಲಿ ವೈವಿಧ್ಯಮಯ ಉಡುಪುಗಳನ್ನು ಧರಿಸಿದ ಮಕ್ಕಳಿಗೆ ಹೂಗುಚ್ಛ ನೀಡುವ ಮೂಲಕ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ವಿನೂತನ ರೀತಿಯಲ್ಲಿ ಚಾಲನೆ ನೀಡಿದರು.
ನಂತರ ಮಾತನಾಡಿದ ಸಿಎಂ, ಮಕ್ಕಳಿಗೆ ಶೂ ಭಾಗ್ಯ ಯೋಜನೆಯನ್ನು ಘೋಷಿಸಿದರು. ಸರ್ಕಾರ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದೆ. ಕಡ್ಡಾಯ ಶಿಕ್ಷಣ, ಅಕ್ಷರ ದಾಸೋಹ, ಕ್ಷೀರಭಾಗ್ಯ, ನೋಟ್ ಪುಸ್ತಕಗಳನ್ನು ನೀಡುತ್ತಿದ್ದು, ಇದೀಗ ಇವುಗಳ ಸಾಲಿಗೆ ಶೂ ಭಾಗ್ಯ ಯೋಜನೆ ಸೇರಿಕೊಳ್ಳಲಿದೆ. ಈ ವರ್ಷದಿಂದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಒಂದು ಜೊತೆ ಶೂ, 2 ಜೊತೆ ಕಾಲು ಚೀಲ ವಿತರಣೆ ಮಾಡಲಾಗುತ್ತದೆ ಎಂದು ಪ್ರಕಟಿಸಿದರು.