ಜಿಲ್ಲಾ ಸುದ್ದಿ

ಜನೌಷಧಕ್ಕೆ ಪ್ರಸ್ತಾವ ಸಲ್ಲಿಸಿ

Manjula VN

ಬೆಂಗಳೂರು: ಬಡ ರೋಗಿಗಳಿಗೆ ಕಡಿಮೆ ದರದಲ್ಲಿ ಔಷಧ ಲಭ್ಯವಾಗಲು ಜನೌಷಧ ಮಳಿಗೆಗಳನ್ನು ತೆರೆಯಲು ರಾಜ್ಯ ಸರ್ಕಾರ ಕೂಡಲೇ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್ ಸಲಹೆ ನೀಡಿದರು.

ಶಾಕಾಂಬರಿನಗರ ವಾರ್ಡ್ ನಲ್ಲಿ ಭಾನುವಾರ ಪಾಲಿಕೆ ಸದಸ್ಯರ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ದೇಶದ 7 ರಾಜ್ಯಗಳಲ್ಲಿ ಜನೌಷಧ ಮಳಿಗೆಗಳು ಕಾರ್ಯಾರಂಭಗೊಂಡಿದ್ದು, 17 ರಾಜ್ಯಗಳು ಒಪ್ಪಂದ ಮಾಡಿಕೊಂಡಿವೆ. ಆಧರೆ ಕರ್ನಾಟಕ ಸರ್ಕಾರದಿಂದ ಈ ಬಗ್ಗೆ ಯಾವುದೇ ಪ್ರಸ್ತಾವ ಬಂದಿಲ್ಲ. ಸುಮಾರು ಒಂದೂವರೆ ವರ್ಷಗಳಿಂದ ಪ್ರಸ್ತಾವನೆ ಸಲ್ಲಿಸುವಂತೆ ಹಲವು ಬಾರಿ ಹೇಳಿದ್ದರೂ, ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಡ ರೋಗಿಗಳು ರಕ್ತದೊತ್ತಡ, ಡಯಾ ಬಿಟಿಸ್, ಹೃದಯ ಸಂಬಂಧಿ ರೋಗಿಗಳ ಉಚಿತ ತಪಾಸಣೆಗೆ ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ ಮುಂದಿನ ತಿಂಗಳ ಅಂತ್ಯದಲ್ಲಿ ವಿಜಯನಗರ, ಗೋವಿಂದರಾಜ ನಗರ ಹಾಗೂ ಜಯನಗರ ವಿಧಾನಸಭಾ ಕ್ಷೇತ್ರಗಳ ವಾರ್ಡ್ ಗಳಲ್ಲಿ ಆರೋಗ್ಯ ಕೇಂದ್ರಗಳನ್ನು ತೆರೆಯಲಾಗುವುದು.

ಜನೌಷಧ ಮಳಿಗೆಗಳು ಮತ್ತು ಆರೋಗ್ಯ ಕೇಂದ್ರಗಳನ್ನು ಪೈಲಟ್ ಮಾದರಿಯಲ್ಲಿ ಆರಂಭಿಸಲಾಗುವುದು. ಕಸದಿಂದ ತಯಾರಿಸಿದ ಗೊಬ್ಬರಕ್ಕೆ ಸಬ್ಸಿಡಿ ನೀಡುವ ಪ್ರಸ್ತಾವನೆ ಕೇಂದ್ರ ಸಚಿವ ಸಂಪುಟದಲ್ಲಿದ್ದು, ಅನುಮತಿ ಸಿಕ್ಕ ಕೂಡಲೇ ಸಬ್ಸಿಡಿ ನೀಡಲಾಗುವುದು ಎಂದು ತಿಳಿಸಿದರು. ಶಾಸಕ ವಿಜಯಕುಮಾರ್, ಪಾಲಿಕೆ ಸದಸ್ಯೆ ಎಂ.ಮಾಲತಿ. ಲಕ್ಷ್ಮಿ ನಟರಾಜ್ ಇದ್ದರು.

SCROLL FOR NEXT